ಹೈದರಾಬಾದ್:ಕಳೆದ 31 ವರ್ಷಗಳಿಂದ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲುವಿಗಾಗಿ ಭಾರತ ಎದುರು ನೋಡುತ್ತಿದೆ. ರೋಹಿತ್ ಶರ್ಮಾ ನಾಯಕತ್ವದ ಪ್ರವಾಸಿ ಟೀಮ್ ಇಂಡಿಯಾ ಎರಡು ಟೆಸ್ಟ್ ಪಂದ್ಯಗಳ ಸರಣಿ ಗೆಲ್ಲುವ ವಿಶ್ವಾಸವಿದೆ. ವೈಟ್ ಜರ್ಸಿಯಲ್ಲಿ ಅನುಭವಿಗಳು ಮತ್ತು ಯುವ ಆಟಗಾರರು ಕಾಮನಬಿಲ್ಲಿನ ನಾಡಿನಲ್ಲಿ ಮೈದಾನಕ್ಕಿಳಿದಿದ್ದಾರೆ. ಕೋಚ್ ದ್ರಾವಿಡ್ ಈ ನೆಲದಲ್ಲಿ ಗೆಲುವು ಸಾಧಿಸಲು ಸ್ವಲ್ಪ ಅದೃಷ್ಟ ಬೇಕು ಎಂದು ಹೇಳಿದ್ದಾರೆ.
ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಭಾರತ ಟೆಸ್ಟ್ ಸರಣಿಗಳನ್ನು ಗೆದ್ದಿದೆ. ಆದರೆ 1992ರಿಂದ ದಕ್ಷಿಣ ಆಫ್ರಿಕಾಕ್ಕೆ ಏಳು ಬಾರಿ ಪ್ರವಾಸ ಮಾಡಿರುವ ತಂಡವು ಕೇವಲ ನಾಲ್ಕು ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದು, ಸರಣಿ ಗೆಲ್ಲುವಲ್ಲಿ ವಿಫಲವಾಗಿದೆ. ಹೀಗಾಗಿ ರೋಹಿತ್ ಪಡೆಗೆ ಸರಣಿ ಗೆಲುವು ಪ್ರತಿಷ್ಠೆಯಾಗಿದೆ.
"ನಾವು ಒಂದೆರಡು ಬಾರಿ ಗೆಲುವಿನ ಹತ್ತಿರ ಬಂದಿದ್ದೇವೆ. ನಾವು ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಕ್ರಿಕೆಟ್ ಆಡಿದ್ದೇವೆ. ಕೆಲವು ಪಂದ್ಯಗಳಲ್ಲಿ ಗೆಲುವಿನ ಸನಿಹ ಇದ್ದಾಗ 40-50 ರನ್ ಗಳಿಸಲು ಸಾಧ್ಯವಾಗಲಿಲ್ಲ. ಕಳೆದ ಬಾರಿಯ ಪ್ರವಾಸದಲ್ಲಿ ಇಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ. ನಮ್ಮ ಬೌಲರ್ಗಳು ಇಲ್ಲಿನ ಪಿಚ್ನಲ್ಲಿ 20 ವಿಕೆಟ್ಗಳನ್ನು ಕಬಳಿಸುವ ಸಾಮರ್ಥ್ಯ ಹೊಂದಿದ್ದಾರೆ" ಎಂದರು.