ನವದೆಹಲಿ : ಏಷ್ಯಾಕಪ್ನಲ್ಲಿ ಫೈನಲ್ಗೆ ಪ್ರವೇಶ ಪಡೆದಿದ್ದ ಭಾರತಕ್ಕೆ ನಿನ್ನೆ ಬಾಂಗ್ಲಾ ವಿರುದ್ಧದ ಪಂದ್ಯವನ್ನು ಔಪಚಾರಿಕ ಕದನ ಎಂದೇ ಬಿಂಬಿಸಲಾಗಿತ್ತು. ಇದರಿಂದ ಭಾರತ ತಂಡದಲ್ಲಿ ಪ್ರಮುಖ ಐದು ಬದಲಾವಣೆಗಳನ್ನು ಮಾಡಿ ಮೈದಾನಕ್ಕಿಳಿದಿತ್ತು. ಶುಕ್ರವಾರದ ಸೋಲು ಏಷ್ಯಾಕಪ್ಗೆ ಯಾವುದೇ ಪರಿಣಾಮ ಬೀರಿಲ್ಲವಾದರೂ ಭಾರತ ದೊಡ್ಡ ನಷ್ಟವನ್ನು ಅನುಭವಿಸಿದೆ.
ಏಷ್ಯಾಕಪ್ಗೆ ಬಾಂಗ್ಲಾದೇಶ ವಿರುದ್ಧದ ಪಂದ್ಯ ಪ್ರಾಮುಖ್ಯತೆ ಪಡೆದಿಲ್ಲ ಎಂಬ ಕಾರಣಕ್ಕೆ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ಗೆ ಫೈನಲ್ ಪಂದ್ಯದ ಸಲುವಾಗಿ ವಿಶ್ರಾಂತಿ ನೀಡಲಾಗಿತ್ತು. ಇವರ ಬದಲಾಗಿ ತಂಡದಲ್ಲಿ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ ಮತ್ತು ಪ್ರಸಿದ್ಧ್ ಕೃಷ್ಣಗೆ ಅವಕಾಶ ಮಾಡಿಕೊಡಲಾಗಿತ್ತು.
ಈ ಬದಲಾವಣೆಯಿಂದ ತಂಡಕ್ಕೆ ಹೆಚ್ಚಿನ ಹೊಡೆತ ಆಗಿದೆ ಎಂದು ಹೇಳಲಾಗದು. ಆದರೆ ನಿನ್ನೆ ಪಂದ್ಯವನ್ನು ಗೆದ್ದಿದ್ದರೆ ಭಾರತ ಮೂರು ಮಾದರಿಯ ಕ್ರಿಕೆಟ್ನಲ್ಲಿ ಅಗ್ರಸ್ಥಾನದ ತಂಡವಾಗಿ ಹೊರಹೊಮ್ಮುತ್ತಿತ್ತು. ಈ ಸುವರ್ಣ ಅವಕಾಶ ತಂಡದ ಸೋಲಿನಿಂದಾಗಿ ಕೈತಪ್ಪಿದಂತಾಗಿದೆ. ಅಲ್ಲದೇ ನಿನ್ನೆ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾವನ್ನು ಮಣಿಸಿದ್ದು, ಅಗ್ರಸ್ಥಾನಕ್ಕೇರಲು ಭಾರತಕ್ಕೆ ಸುಲಭ ಮಾರ್ಗದಂತಾಗಿತ್ತು. ಆದರೆ 6 ರನ್ನ ಸೋಲು ನಂ.1 ಸ್ಥಾನವನ್ನು ಕಸಿದುಕೊಂಡಿತು.
ಇತ್ತೀಚೆಗೆ ನವೀಕರಿಸಲಾದ ಏಕದಿನ ಶ್ರೇಯಾಂಕದಲ್ಲಿ ದೊಡ್ಡ ಬದಲಾವಣೆ ಆಯಿತು. ಏಷ್ಯಾಕಪ್ನಲ್ಲಿ ಎರಡು ಪಂದ್ಯಗಳಲ್ಲಿ ಸೋಲು ಕಂಡ ಪಾಕಿಸ್ತಾನ ತನ್ನ ಅಗ್ರ ಶ್ರೇಯಾಂಕವನ್ನು ಕಳೆದುಕೊಂಡು ಮೂರನೇ ಸ್ಥಾನಕ್ಕೆ ಕುಸಿಯಿತು. ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಇನ್ನಿಂಗ್ಸ್ಗಳನ್ನು ಆಡಿದ ಆಸ್ಟ್ರೇಲಿಯಾ 118 ಅಂಕದಿಂದ ನಂ.1 ಸ್ಥಾನಕ್ಕೆ ಏರಿಕೆ ಕಂಡಿತು. ಏಷ್ಯಾಕಪ್ನಲ್ಲಿ ಸತತ ಗೆಲುವು ದಾಖಲಿಸಿದ ಭಾರತವೂ ತನ್ನ ರ್ಯಾಂಕಿಂಗ್ನ್ನು ಸುಧಾರಿಸಿಕೊಂಡು 116 ಅಂಕದಿಂದ ಎರಡನೇ ಸ್ಥಾನಕ್ಕೆ ಬಂದಿದೆ. ನಿನ್ನೆ ಪಂದ್ಯವನ್ನು ಭಾರತ ಗೆದ್ದಿದ್ದರೆ ಏಕದಿನ ಕ್ರಿಕೆಟ್ನಲ್ಲೂ ಭಾರತ ತಂಡ ನಂ.1 ತಂಡವಾಗಿರುತ್ತಿತ್ತು. ಈಗಾಗಲೇ ಭಾರತ ಟೆಸ್ಟ್ ಮತ್ತು ಟಿ20ಯಲ್ಲಿ ಅಗ್ರಮಾನ್ಯ ತಂಡವಾಗಿದೆ.
ವಿಶ್ವಕಪ್ಗೂ ಮುನ್ನ ನಂ.1 ಸ್ಥಾನ?: ಭಾರತದಲ್ಲಿ ನಡೆಯಲಿರುವ ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ ಏಕದಿನ ಕ್ರಿಕೆಟ್ನ ನಂ.1 ಪಟ್ಟವನ್ನು ಅಲಂಕರಿಸಬಹುದು. ಅದು ಹೇಗೆ ಅಂತಿರಾ..? ವಿಶ್ವಕಪ್ಗೂ ಮುನ್ನ ಭಾರತದಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಪಂದ್ಯದ ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಭಾರತ ಆಸ್ಟ್ರೇಲಿಯಾವನ್ನು ಮಣಿಸಿದರೆ ನಂ.1 ತಂಡ ಕೆಳಗಿಳಿಯಲಿದೆ. ಭಾರತ ಮತ್ತು ಆಸಿಸ್ ನಡುವೆ ಕೇವಲ 2 ಅಂಕಗಳ ಅಂತರ ಇದೆ. ಒಂದು ಪಂದ್ಯದ ಸೋಲು - ಗೆಲುವು ಸ್ಥಾನ ಪಲ್ಲಟಕ್ಕೆ ಕಾರಣ ಆಗಲಿದೆ.
ಇದನ್ನೂ ಓದಿ:ಭಾರತ ತಂಡಕ್ಕೆ ಕಾಡಿದ ಗಾಯದ ಸಮಸ್ಯೆ.. ವಿಶ್ವಕಪ್ ತಂಡದ ಆಟಗಾರ ಏಷ್ಯಾಕಪ್ನಿಂದ ಹೊರಕ್ಕೆ?