ಪರ್ತ್ (ಆಸ್ಟ್ರೇಲಿಯಾ) :ಇಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಹಣಾಹಣೆಯಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡು ಉತ್ತಮ ಲಯ ಕಂಡುಕೊಂಡಿರುವ ಟೀಂ ಇಂಡಿಯಾ ಭಾನುವಾರ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೆಣಸಲಿದೆ. ಈಗಾಗಲೇ ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿರುವ ಟೀಂ ಇಂಡಿಯಾ, ಈ ಪಂದ್ಯದಲ್ಲೂ ಗೆದ್ದು ಸೆಮಿಸ್ ಹಾದಿಯನ್ನು ಇನ್ನಷ್ಟು ಸುಗಮಗೊಳಿಸುವ ನಿರೀಕ್ಷೆಯಲ್ಲಿದೆ. ಅತ್ತ ಬಾಂಗ್ಲಾದೇಶದ ವರುದ್ಧ ಅಮೋಘ ಗೆಲುವು ದಾಖಲಿಸಿರುವ ದಕ್ಷಿಣ ಆಫ್ರಿಕಾ ತಂಡ ಕೂಡ ಈ ಪಂದ್ಯವನ್ನು ಗೆದ್ದು ಗ್ರೂಪ್ 2ರಲ್ಲಿ ಅಗ್ರಸ್ಥಾನಕ್ಕೇರುವ ಉತ್ಸಾಹದಲ್ಲಿದೆ. ಹಾಗಾಗಿ ಎರಡು ಬಲಿಷ್ಠ ತಂಡಗಳು ಹಾಟ್ ಫೇವರಿಟ್ ಆಗಿ ಕಣಕ್ಕೆ ಇಳಿಯುವ ನಿರೀಕ್ಷೆಯಲ್ಲಿವೆ.
ಪಾಕಿಸ್ತಾನ ಹಾಗೂ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಅಮೋಘ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ತಂಡದ ವಿರುದ್ಧವೂ ಅದೇ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ. ಈ ಎರಡೂ ಪಂದ್ಯಗಳಲ್ಲಿ ಕೊಹ್ಲಿ ತೋರಿದ ಉತ್ತಮ ಫಾರ್ಮ್ ಅವರ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಭಾನುವಾರದ ಪಂದ್ಯವನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಎದುರಾಳಿ ತಂಡದ ಆಟಗಾರ ಏಡನ್ ಮಾರ್ಕ್ರಾಮ್, ರೋಮಾಂಚನಕಾರಿಯಾಗಿರಲಿದೆ ಎಂದಿದ್ದಾರೆ. ವಿರಾಟ್ ಕೊಹ್ಲಿ ಅವರನ್ನು ಬಹುಬೇಗ ಕಟ್ಟಿ ಹಾಕುವ ಮೂಲಕ ಟೀಂ ಇಂಡಿಯಾಗೆ ಆಘಾತ ನೀಡುವ ಮಾತನ್ನಾಡಿದ್ದಾರೆ.
ಈ ಪಂದ್ಯದ ಫಲಿತಾಂಶವು ಗುಂಪು 2 ರಲ್ಲಿ ಸೆಮಿಫೈನಲ್ ತಲುಪುವ ತಂಡಗಳನ್ನು ನಿರ್ಧರಿಸಲಿರುವುದರಿಂದ ಉಭಯ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಭಾರತ ಈಗಾಗಲೇ ಎರಡು ಗೆಲುವಿನೊಂದಿಗೆ ಗ್ರೂಪ್ 2ರಲ್ಲಿ ಅಗ್ರ 1 ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ಒಂದು ಗೆಲುವು ಮತ್ತು ಇನ್ನೊಂದು ಡ್ರಾದೊಂದಿಗೆ ಎರಡನೇ ಸ್ಥಾನದಲ್ಲಿದೆ.
ಉಭಯ ತಂಡಗಳ ಬಲಾಬಲವನ್ನು ನೋಡಿದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಹಾಟ್ ಫೇವರಿಟ್ ಆಗಿ ಅಖಾಡಕ್ಕಿಳಿಯಲಿದೆ. ಫಾರ್ಮ್ ಕೊರತೆಯಿಂದ ಬಳಲುತ್ತಿರುವ ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾ ಪರ ನೆದರ್ಲೆಂಡ್ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ ಯಶಸ್ವಿಯಾಗಲಿದ್ದಾರೆ. ಮಹತ್ವದ ಪಂದ್ಯದಲ್ಲಿ ಇನ್ನೋರ್ವ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಕೂಡ ಮಿಂಚಿದರೆ ಭಾರತಕ್ಕೆ ಹಿನ್ನಡೆಯಾಗದು ಎಂದು ಟೀಂ ಮ್ಯಾನೇಜ್ಮೆಂಟ್ ಹೇಳಿಕೊಂಡಿದೆ.
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಸೂಪರ್ ಫಾರ್ಮ್‌ನಲ್ಲಿರುವುದು ಭಾರತಕ್ಕೆ ಬಲ ಬಂದಂತಾಗಿದೆ. ಆಲ್ ರೌಂಡರ್ಸ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚಿದರೆ, ಅಕ್ಷರ್ ಪಟೇಲ್ ತಂಡಕ್ಕೆ ಆಸರೆಯಾಗಲಿ ಎಂದು ಟೀಂ ಇಂಡಿಯಾ ಹಾರೈಸಿದೆ.
ಬೌಲಿಂಗ್ ವಿಚಾರದಲ್ಲಿ ಸದ್ಯ ಭಾರತ ಅತ್ಯಂತ ಬಲಿಷ್ಠವಾಗಿ ಕಾಣುತ್ತದೆ. ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಹಿಂದಿನ ಫಾರ್ಮ್‌ಗೆ ಮರಳಿರುವುದು ಮತ್ತೊಂದು ಸಕಾರಾತ್ಮಕ ಅಂಶವಾಗಿದೆ. ಇದಲ್ಲದೆ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಪ್ರದರ್ಶನವು ತಂಡವನ್ನು ಗೆಲುವಿನ ಲಯಕ್ಕೆ ತರಬಲ್ಲದು.
ದಕ್ಷಿಣ ಆಫ್ರಿಕಾ ಕೂಡ ಎಲ್ಲ ಕ್ಷೇತ್ರಗಳಲ್ಲಿ ಟೀಂ ಇಂಡಿಯಾಕ್ಕೆ ಸಮನಾಗಿ ಕಾಣುತ್ತಿದೆ. ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯ ಮಳೆಯಿಂದಾಗಿ ಡ್ರಾದಲ್ಲಿ ಅಂತ್ಯಗೊಂಡರೆ ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯವನ್ನು 104 ರನ್‌ಗಳಿಂದ ಗೆದ್ದುಕೊಂಡಿದೆ. ಇದೇ ಉತ್ಸಾಹದಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಟೀಂ ಇಂಡಿಯಾವನ್ನು ಸೋಲಿಸಿ ಗ್ರೂಪ್ 2 ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ನಿರೀಕ್ಷೆಯಲ್ಲಿದೆ. ಹಾಗಾಗಿ ನಾಳಿನ ಪಂದ್ಯ ಅತ್ಯಂತ ರೋಚಕವಾಗಿರಲಿದೆ ಎಂಬುದಂತೂ ಸತ್ಯ.
ಇದನ್ನೂ ಓದಿ:T20 World Cup: ಡೇಲ್ ಸ್ಟೇಯ್ನ್ ಪಟ್ಟಿ ಮಾಡಿದ 5 ಅತ್ಯುತ್ತಮ ಬೌಲರ್‌ಗಳು ಇವರೇ..