ಭಾರತ ತಂಡ 10 ವರ್ಷಗಳಿಂದ ಐಸಿಸಿ ಕಪ್ಗೆಲ್ಲುವಲ್ಲಿ ಎಡವುತ್ತಿದೆ. ಎಂಟು ಐಸಿಸಿ ಪಂದ್ಯಗಳಲ್ಲಿ ಮಹತ್ವದ ಘಟ್ಟಕ್ಕೆ ತಲುಪಿ ಸೋಲನುಭವಿಸಿದೆ. ಭಾರತದ ಮುಂದೆ ಇದೇ ವರ್ಷ ತವರಿನಲ್ಲಿ ನಡೆಯುವ ಏಕದಿನ ವಿಶ್ವಕಪ್ ಇದ್ದು, ಇದಕ್ಕೆ ಸದೃಢ ತಂಡವನ್ನು ಕಟ್ಟುವ ಜವಾಬ್ದಾರಿ ಭಾರತದ ಕೋಚ್ ದ್ರಾವಿಡ್ ಮುಂದಿದೆ.
ಕಳೆದ ಎರಡು ವರ್ಷಗಳಲ್ಲಿ ಭಾರತದ ಟೆಸ್ಟ್ ಆರಂಭಿಕ ಜೊಡಿ ಮತ್ತು ಬ್ಯಾಟಿಂಗ್ ಸರಾಸರಿ ಉತ್ತಮವಾಗಿಲ್ಲ ಎಂದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೂ ಮುನ್ನ ಅಂಕಿ ಅಂಶಗಳಿಂದ ತಿಳಿದಿತ್ತು. ಆದರೆ ಅನುಭವಿ ಬ್ಯಾಟರ್ಗಳು ಫಾರ್ಮ್ಗೆ ಮರಳಿರುವುದು ಚಾಂಪಿಯನ್ಶಿಪ್ ಗೆಲುವಿಗೆ ಭರವಸೆ ಮೂಡಿಸಿತ್ತು. ಆದರೆ ಭಾರತ ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿದೆ.
ಆರಂಭಿಕರಿಂದ ಹಿಡಿದು ತಂಡದಲ್ಲಿ ಯಾವುದೇ ಬೃಹತ್ ಜೊತೆಯಾಟ ಬಾರದೇ ಇದ್ದ ಕಾರಣ ದೊಡ್ಡ ಮೊತ್ತವನ್ನು ಹಿಮ್ಮೆಟ್ಟಿಸುವಲ್ಲಿ ಟೀಂ ಇಂಡಿಯಾ ಎಡವಿದೆ. ಈ ಬಗ್ಗೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸಹ ಹೇಳಿದ್ದು, ಭಾರತ ಸಂಪೂರ್ಣ ಬ್ಯಾಟಿಂಗ್ ವೈಫಲ್ಯವನ್ನು ಕಾಣುತ್ತಿದೆ. ಬೃಹತ್ ಮೊತ್ತವನ್ನು ಕಲೆಹಾಕಬೇಕಾದರೆ ಒಬ್ಬ ಆಟಗಾರನಾದರೂ ಶತಕ ಗಳಿಸುವುದು ಮುಖ್ಯವಾಗುತ್ತದೆ ಮತ್ತು ಅನುಭವಿ ಬ್ಯಾಟರ್ಗಳು ಬಾಲ್ಗಳ ಬಗ್ಗೆ ಹೆಚ್ಚು ಗಮನ ಹರಿಸಿ ಆಡುವ ಅಗತ್ಯ ಇತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಅನಗತ್ಯ ಆಟಕ್ಕೆ ಭಾರತದ ಬ್ಯಾಟರ್ಗಳು ವಿಕೆಟ್ ಕೊಟ್ಟಿದ್ದಾರೆ ಎಂದರು.
ಧೋನಿ ಸಮಯದಲ್ಲಿ ಆಡಿದ 4 ಐಸಿಸಿ ಟ್ರೋಫಿಗಳಲ್ಲಿ ಭಾರತ 3 ಗೆದ್ದುಕೊಂಡಿತ್ತು. ನಂತರದ ಕಾಲಘಟ್ಟದಲ್ಲಿ 7 ಐಸಿಸಿ ಟ್ರೋಫಿಗಳನ್ನು ಆಡಿದ್ದು, ಒಂದರಲ್ಲಿ ಮಾತ್ರ ಯಶಸ್ಸು ಸಾಧಿಸಿದೆ. ಇದಕ್ಕೆ ಕಾರಣ ಏನು ಎಂದು ಹುಡುಕುವ ಅಗತ್ಯ ಭಾರತಕ್ಕೆ ಈಗ ಇರುವುದಂತೂ ಖಂಡಿತ. ಐಸಿಸಿ ಟ್ರೋಫಿಗಳನ್ನು ನಾಯಕನಾಗಿ ಗೆಲ್ಲಿಸಿಕೊಟ್ಟಿಲ್ಲ ಎಂಬ ಕಾರಣಕ್ಕೆ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದು ಹಾಕಲಾಗಿತ್ತು. ಆದರೆ ಈಗ ಭಾರತದ ಸತತ ಸೋಲಿಗೆ ಕಾರಣ ಏನು ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುವುದರಲ್ಲಿ ಅನುಮಾನ ಇಲ್ಲ.