ಆಕ್ಲೆಂಡ್ :ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಭಾರತ ಮೂರನೇ ಸೋಲು ಕಂಡಿದೆ. ಸೆಮಿಫೈನಲ್ ಪ್ರವೇಶಿಸುವ ಕನಸು ಮತ್ತಷ್ಟು ಕಠಿಣವಾಗಿದೆ. ಆಸ್ಟ್ರೇಲಿಯಾ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಮಿಥಾಲಿ ರಾಜ್ ಬಳಗ 6 ವಿಕೆಟ್ಗಳ ಸೋಲು ಕಂಡಿದೆ.
ಇತ್ತ ವಿಶ್ವಕಪ್ನಲ್ಲಿ ದಾಖಲೆಯ ರನ್ ಚೇಸಿಂಗ್ ಮಾಡುವ ಮೂಲಕ ಟೂರ್ನಿಯಲ್ಲಿ ಸತತ 5ನೇ ಗೆಲುವಿನೊಂದಿಗೆ ಕಾಂಗರೂ ಪಡೆ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 7 ವಿಕೆಟ್ ಕಳೆದುಕೊಂಡು 277 ರನ್ ಗಳಿಸಿತ್ತು. ಯಸ್ತಿಕಾ ಭಾಟಿಯಾ 83 ಎಸೆತಗಲ್ಲಿ 6 ಬೌಂಡರಿ ಸಹಿತ 59 ರನ್, ಮಿಥಾಲಿ ರಾಜ್ 96 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 68 ರನ್, ಹರ್ಮನ್ಪ್ರೀತ್ ಕೌರ್ 47 ಎಸೆತಗಳಲ್ಲಿ 6 ಬೌಂಡರಿ ಸಹಿತ 57 ರನ್ ಮತ್ತು ಪೂಜಾ ವಸ್ತ್ರಾಕರ್ 28 ಎಸೆತಗಳಲ್ಲಿ 34 ರನ್ಗಳಿಸಿದರು.
ಆಸ್ಟ್ರೇಲಿಯಾ ಪರ ಡಾರ್ಸಿ ಬ್ರೌನ್ 30ಕ್ಕೆ3, ಅಲಾನಾ ಕಿಂಗ್ 52ಕ್ಕೆ 2 ಮತ್ತು ಜೊನಾಸೆನ್ 40ಕ್ಕೆ1 ವಿಕೆಟ್ ಪಡೆದರು. ಇನ್ನು 278 ರನ್ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಇನ್ನು 3 ಎಸೆತಗಳಿರುವಂತೆ ಗುರಿ ತಲುಪಿತು.
ರಚೇಲ್ ಹೇನ್ಸ್ 53 ಎಸೆತಗಳಲ್ಲಿ 43, ಅಲಿಸಾ ಹೀಲಿ 65 ಎಸೆತಗಳಲ್ಲಿ 9 ಬೌಂಡರಿ ಸಹಿತ 72, ನಾಯಕಿ ಮೆಗ್ ಲ್ಯಾನಿಂಗ್ 107 ಎಸೆತಗಳಲ್ಲಿ 13 ಬೌಂಡರಿ ಸಹಿತ 97, ಎಲಿಸ್ ಪೆರ್ರಿ 51 ಎಸೆತಗಳಲ್ಲಿ 28, ಬೆತ್ ಮೂನಿ 20 ಎಸೆತಗಳಲ್ಲಿ ಅಜೇಯ 30 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಭಾರತದ ಪರ ಪೂಜಾ ವಸ್ತ್ರಾಕರ್ 43 ರನ್ ನೀಡಿ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಆದರೆ, ಉಳಿದ ಬೌಲರ್ಗಳು ವಿಕೆಟ್ ಪಡೆಯುವಲ್ಲಿ ವಿಫಲರಾದರು. ಹಿರಿಯ ಬೌಲರ್ ಜೂಲನ್ ಗೋಸ್ವಾಮಿ ರನ್ ಗತಿಗೆ ಕಡಿವಾಣ ಹಾಕಲು ಮತ್ತು ವಿಕೆಟ್ ಪಡೆಯಲು ವಿಫಲರಾಗಿದ್ದು ಭಾರತಕ್ಕೆ ದೊಡ್ಡ ಹೊಡೆತ ನೀಡಿತು.
ಇದನ್ನೂ ಓದಿ:ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಅತಿ ಹೆಚ್ಚು 50ಕ್ಕಿಂತ ಹೆಚ್ಚು ರನ್ : ವಿಶ್ವದಾಖಲೆ ಹಂಚಿಕೊಂಡ ಮಿಥಾಲಿ ರಾಜ್