ಕ್ವೀನ್ಸ್ಲ್ಯಾಂಡ್ :ಭಾರತ ಮಹಿಳಾ ತಂಡ ಕೊನೆಯ ಟಿ20 ಪಂದ್ಯದಲ್ಲಿ 14 ರನ್ಗಳಿಂದ ಪರಾಭವಗೊಳ್ಳುವ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಲ್ಲಿ ಸೋಲು ಕಂಡಿದೆ. ಜೊತೆಗೆ ಬಹುಮಾದರಿ ಸರಣಿಯನ್ನು 11-5 ಅಂಕಗಳ ಅಂತರದಿಂದ ಕಳೆದುಕೊಂಡಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಏಕದಿನ ಸರಣಿಯನ್ನು 2-1ರಲ್ಲಿ ಸೋಲು ಕಂಡಿದ್ದ ಭಾರತ ತಂಡ ಟೆಸ್ಟ್ ಸರಣಿಯಲ್ಲಿ ಡ್ರಾ ಸಾಧಿಸಿತ್ತು. ಇದೀಗ ಟಿ20 ಸರಣಿಯನ್ನ 2-0 ಅಂತರದಲ್ಲಿ ಕಳೆದುಕೊಂಡಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮಹಿಳಾ ತಂಡ 20 ಓವರ್ಗಳಲ್ಲಿ 149 ರನ್ಗಳಿಸಿತ್ತು. ಬೆತ್ ಮೂನಿ 43 ಎಸೆತಗಳಲ್ಲಿ 10 ಬೌಂಡರಿ ಸಹಿತ 61 ಹಾಗೂ ತಹಿಲಾ ಮೆಕ್ಗ್ರಾತ್ ಅಜೇಯ 44 ರನ್ಗಳಿಸಿದ್ದರು.
150 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 136 ರನ್ಗಳಿಸಲಷ್ಟೇ ಶಕ್ತವಾಗಿ 14 ರನ್ಗಳಿಂದ ಸೋಲುಂಡಿತು. ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ 52 ರನ್ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳು ಆಸೀಸ್ ದಾಳಿಯನ್ನು ಸಮರ್ಥವಾಗಿ ಎದರಿಸುವಲ್ಲಿ ವಿಫಲರಾದರು.