ದುಬೈ :ಭಾರತ ತಂಡ ಇಂಗ್ಲೆಂಡ್ ವಿರುದ್ಧ 151 ರನ್ಗಳ ಜಯ ಸಾಧಿಸಿದ ನಂತರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಅಗ್ರಸ್ಥಾನದಲ್ಲಿದ್ದ ವಿಂಡೀಸ್, ಪಾಕ್ ವಿರುದ್ಧ 2ನೇ ಟೆಸ್ಟ್ನಲ್ಲಿ ಸೋಲು ಕಂಡ ನಂತರ 3ನೇ ಸ್ಥಾನಕ್ಕೆ ಜಾರಿದೆ.
ಮಳೆಯಿಂದ ಡ್ರಾನಲ್ಲಿ ಅಂತ್ಯಗೊಂಡಿದ್ದ ಮೊದಲ ಟೆಸ್ಟ್ನಲ್ಲಿ ಭಾರತ 4 ಅಂಕ ಪಡೆದಿತ್ತು. ನಂತರ 2ನೇ ಟೆಸ್ಟ್ ಪಂದ್ಯದಲ್ಲಿ ಗೆದ್ದು 12 ಅಂಕ ಪಡೆದಿತ್ತು. ಆದರೆ, ಮೊದಲ ಪಂದ್ಯದಲ್ಲಿ ನಿಧಾನಗತಿಯ ಓವರ್ ಮಾಡಿದ ಕಾರಣ 2 ಅಂಕಗಳನ್ನು ಕಳೆದುಕೊಂಡು, ಒಟ್ಟು 14 ಅಂಕ ಹೊಂದಿದೆ.
ವೆಸ್ಟ್ ಇಂಡೀಸ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ 109 ರನ್ಗಳಿಂದ ಜಯ ಸಾಧಿಸಿದ ಪಾಕಿಸ್ತಾನ, 12 ಅಂಕಗಳೊಂದಿಗೆ ಭಾರತ ನಂತರದ ಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್ ಕೂಡ 12 ಅಂಕ ಪಡೆದು 3ನೇ ಸ್ಥಾನ ಪಡೆದಿದೆ.