ತಿರುವನಂತಪುರಂ: ಟಿ20 ವಿಶ್ವಕಪ್ನ ಟ್ರಯಲ್ ರನ್ ಆಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಕೇರಳದ ತಿರುವನಂತಪುರಂನಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಭಾರತ ತಂಡ ಬೌಲಿಂಗ್ ಆಯ್ದುಕೊಂಡಿದೆ. ಉಭಯ ತಂಡಗಳು ವಿಶ್ವಕಪ್ ಗುರಿಯಾಗಿಸಿಕೊಂಡು ತಂಡದ ಸಂಯೋಜನೆಗಾಗಿ ಉತ್ತಮ ಪ್ರದರ್ಶನ ನೀಡುವುದು ಮಹತ್ವದ್ದಾಗಿದೆ. ಉಭಯ ತಂಡಗಳು 20 ಪಂದ್ಯಗಳಲ್ಲಿ ಈವರೆಗೂ ಸೆಣಸಾಡಿದ್ದು, ಭಾರತ 11 ರಲ್ಲಿ ಗೆಲುವು ಕಂಡರೆ, ಆಫ್ರಿಕಾ 8 ರಲ್ಲಿ ವಿಜಯ ಸಾಧಿಸಿದೆ.
ಭಾರತ ತಂಡವನ್ನು ಪರಿಷ್ಕರಿಸಲಾಗಿದ್ದು, ಕೊರೊನಾ ಪೀಡಿತ ಮೊಹಮದ್ ಶಮಿ ಬದಲಾಗಿ ಉಮೇಶ್ ಯಾದವ್, ಗಾಯಗೊಂಡಿರುವ ದೀಪಕ್ ಹೂಡಾ ಜಾಗಕ್ಕೆ ಶ್ರೇಯಸ್ ಅಯ್ಯರ್ರನ್ನು ಸೇರಿಸಿಕೊಳ್ಳಲಾಗಿದೆ. ವಿಶ್ವಕಪ್ ದೃಷ್ಟಿಯಿಂದ ಹಾರ್ದಿಕ್ ಪಾಂಡ್ಯಾ, ಭುವನೇಶ್ವರ್ ಕುಮಾರ್ಗೆ ವಿಶ್ರಾಂತಿ ನೀಡಲಾಗಿದೆ. ಹಾಗಾಗಿ ಆಲ್ರೌಂಡರ್ ಶಹಬಾಜ್ ಅಹ್ಮದ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
ಭಾರತ ತಂಡದಲ್ಲಿ ಬದಲಾವಣೆ: ವಿಶ್ರಾಂತಿ ಪಡೆದಿರುವ ಹಾರ್ದಿಕ್ ಪಾಂಡ್ಯಾ, ಭುವನವೇಶ್ವರ್ ಬದಲಾಗಿ ರಿಷಬ್ ಪಂತ್, ಅರ್ಷದೀಪ್ ಆಡಿದರೆ, ಜಸ್ಪ್ರೀತ್ ಬೂಮ್ರಾ, ಯಜುವೇಂದ್ರ ಚಹಲ್ ಬದಲಿಗೆ ದೀಪಕ್ ಚಹರ್ ಮತ್ತು ರವಿಚಂದ್ರನ್ ಅಶ್ವಿನ್ ಕಣಕ್ಕಿಳಿಯಲಿದ್ದಾರೆ.