ಇಂದೋರ್ :ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಗೆ ತಲುಪುವ ಗುರಿಯೊಂದಿಗೆ ಕಣಕ್ಕಿಳಿದ ಭಾರತ ಮೂರನೇ ಟೆಸ್ಟ್ ಪಂದ್ಯದಲ್ಲಿ ಪತನದ ಹಾದಿ ಹಿಡಿದಿದೆ. ಮೊದಲ ದಿನದಾಟದ ಭೋಜನ ವಿರಾಮದ ವೇಳೆಗೆ 7 ವಿಕೆಟ್ ಕಳೆದು ಕೊಂಡಿತ್ತು. ನಂತರ ಅರ್ಧಗಂಟೆಯಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡ ಭಾರತ 109 ರನ್ ಗಳಿಸಿತು. ಬೌನ್ಸಿ ಪಿಚ್ನಲ್ಲಿ ಕಮಾಲ್ ಮಾಡಿದ ಆಸೀಸ್ ಸ್ಪಿನ್ನರ್ಗಳು ಭಾರತವನ್ನು ಕಾಡಿದರು. ಮ್ಯಾಥ್ಯೂ ಕುಹ್ನೆಮನ್ 5 ವಿಕೆಟ್ ಗಳಿಸಿದರು.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ - ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಬ್ಯಾಟಿಂಗ್ನಲ್ಲಿ ವಿರಾಟ್ 22 ಮತ್ತು ಗಿಲ್ 21 ರನ್ ಗಳಿಸಿದ್ದು ಬಿಟ್ಟರೆ ಮತ್ತಾರು 20ರ ಗಡಿ ದಾಟಿಲ್ಲ. 5ರನ್ ಒಳಗೆ 5 ವಿಕೆಟ್ಗಳನ್ನು ಭಾರತೀಯರು ಒಪ್ಪಿಸಿದ್ದಾರೆ.
ಮ್ಯಾಥ್ಯೂ ಕುಹ್ನೆಮನ್ 5, ನಾಥನ್ ಲಿಯಾನ್ 3 ಮತ್ತು ಟಾಡ್ ಮರ್ಫಿ 1 ವಿಕೆಟ್ ಪಡೆದರು. ಮೈಕೆಲ್ ಕಾಸ್ಪ್ರೊವಿಚ್ ಆಸಿಸ್ ತಂಡ ಮೂವರು ಸ್ಪಿನ್ನರ್ಗಳೊಂದಿಗೆ ಆಡುವ ಅಗತ್ಯ ಇಲ್ಲ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಆದರೆ ಆಸಿಸ್ ಸ್ಪಿನ್ನರ್ಗಳು ಈ ಅಭಿಪ್ರಾಯವನ್ನು ಅಡಿ ಮೇಲೆ ಮಾಡಿದ್ದಾರೆ. ಬೌನ್ಸಿ ಪಿಚ್ನಲ್ಲೂ ಕಮಾಲ್ ಮಾಡಿದ್ದು 9 ವಿಕೆಟ್ಗಳನ್ನು ಸ್ಪಿನ್ನರ್ಗಳೇ ಕಬಳಿಸಿದ್ದಾರೆ.
ಮೊದಲ ಟೆಸ್ಟ್ನಲ್ಲಿ ಶತಕ ಗಳಿಸಿದ್ದ ನಾಯಕ ರೋಹಿತ್ ಶರ್ಮಾ 12 ರನ್ಗೆ ವಿಕೆಟ್ ಒಪ್ಪಿಸಿದರು. ಫಾರ್ಮ್ ಕೊರತೆಯಿಂದ ಹೊರಗುಳಿದಿರುವ ಕೆ. ಎಲ್. ರಾಹುಲ್ ಸ್ಥಾನಕ್ಕೆ ಬದಲಿಯಾಗಿ ಬಂದ ಶುಭಮನ್ ಗಿಲ್ ವೇಗವಾಗಿ ರನ್ ಗಳಿಸಿದರಾದರೂ 21 ರನ್ಗೆ (18 ಎಸೆತದಲ್ಲಿ) ಪೆವಿಲಿಯನ್ ದಾರಿ ಹಿಡಿದರು. 101ನೇ ಪಂದ್ಯ ಆಡುತ್ತಿರುವ ಚೇತೇಶ್ವರ ಪೂಜಾರ ಒಂದು ರನ್ಗೆ ಔಟ್ ಆದರು.
ಕಳೆದೆರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ಜಡೇಜ (4) ಬಡ್ತಿ ಪಡೆದರಾದರೂ ಲಿಯಾನ್ ಬೌಲಿಂಗ್ನಲ್ಲಿ ಎಡವಿದರು. ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ವಿರಾಟ್ ಕೊಹ್ಲಿ ತವರು ನೆಲದ ಅಂತರಾಷ್ಟ್ರೀಯ 200ನೇ ಪಂದ್ಯದಲ್ಲಿ ಎದುರಾಳಿಗಳ ಮೇಲೆ ಸವಾರಿ ಮಾಡುವಂತೆ ಕಂಡರೂ 22 ರನ್ಗೆ ಪೆವಿಲಿಯನ್ ಹಾದಿ ಹಿಡಿದರು. ಡೆಬ್ಯೂ ಸಿರೀಸ್ನಲ್ಲಿ ಕೀಪರ್ ಶ್ರೀಕರ್ ಭರತ್(17) ಮತ್ತೆ ವೈಫಲ್ಯ ಕಂಡರು. ಅಶ್ವಿನ್ 3ಕ್ಕೆ ಔಟ್ ಆದರೆ, ಉಮೇಶ್ ಯಾದವ್ ಎರಡು ಸಿಕ್ಸ್ ಮತ್ತು 1 ಬೌಂಡರಿಯಿಂದ 17 ರನ್ ಗಳಿಸಿದರು. ಸಿರಾಜ್ ಶೂನ್ಯ ಸುತ್ತಿದರು ಭಾರತ 109 ಮೊದಲ ಇನ್ನಿಂಗ್ಸ್ ಮುಗಿಸಿದೆ.