ಸೌತಾಂಪ್ಟನ್ :ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಜೂನ್ 18ರಂದು ನಡೆಯುವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಮುಖಾಮುಖಿಯಾಗಲಿವೆ. ಇದೇ ಮೊದಲ ಬಾರಿಗೆ ನಡೆಯುತ್ತಿರುವ WTCಯಲ್ಲಿ ವಿರಾಟ್ ಕೊಹ್ಲಿ ಪಡೆ ಪ್ರಾಬಲ್ಯಯುತ ಪ್ರದರ್ಶನ ತೋರಿದೆ. ವಿದೇಶದಲ್ಲಿ ಆಡಿದ 3 ಸರಣಿಗಳಲ್ಲಿ 2ರಲ್ಲಿ ಗೆದ್ದಿದ್ದರೆ, ಪ್ರತಿಸ್ಪರ್ಧಿ ನ್ಯೂಜಿಲ್ಯಾಂಡ್ 2 ವಿದೇಶಿ ಸರಣಿಯಲ್ಲಿ ಕೇವಲ ಒಂದೇ ಒಂದು ಪಂದ್ಯ ಮಾತ್ರ ಗೆದ್ದಿದೆ. ಗೆದ್ದಿರುವ ಮೂರು ಸರಣಿಗಳು ತವರಿನಲ್ಲಿ ನಡೆದಿವೆ ಎನ್ನುವುದು ಗಮನಾರ್ಹ ಸಂಗತಿ.
WTCಯಲ್ಲಿ 2019-21ರ ಅವಧಿಯಲ್ಲಿ ನ್ಯೂಜಿಲ್ಯಾಂಡ್ ತನ್ನ ನೆಲದಲ್ಲಿ ಭಾರತ, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದಿದೆ. ಇದೇ ಅವರನ್ನು ಫೈನಲ್ ಪ್ರವೇಶಿಸುವಂತೆ ಮಾಡಿದೆ. ಆದರೆ, ವಿಲಿಯಮ್ಸನ್ ಪಡೆ WTCಯಲ್ಲಿ ಕಳಪೆ ಆರಂಭ ಪಡೆದಿತ್ತು. ಮೊದಲು 2019ರ ಶ್ರೀಲಂಕಾ ಪ್ರವಾಸದಲ್ಲಿ 1-1ರಲ್ಲಿ ಡ್ರಾ ಸಾಧಿಸಿದರೆ, ನಂತರ 2019-20ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ 0-3ರಲ್ಲಿ ಹೀನಾಯ ಸೋಲು ಕಂಡಿತ್ತು.
ಆದರೆ, ಭಾರತ ತಂಡದ 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2-0ಯಲ್ಲಿ ಗೆಲ್ಲುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅದ್ಭುತವಾಗಿ ತನ್ನ ಅಭಿಯಾನವನ್ನು ಆರಂಭಿಸಿತ್ತು. ನಂತರ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3-0, ಬಾಂಗ್ಲಾದೇಶದ ವಿರುದ್ಧ 2-0 ಗೆದ್ದರೆ, ಕಿವೀಸ್ನಲ್ಲಿ 0-2ರಲ್ಲಿ ಸೋಲು ಕಂಡಿತ್ತು.
ಕೋವಿಡ್ ವಿರಾಮದ ನಂತರ ಆಸ್ಟ್ರೇಲಿಯಾದಲ್ಲಿ ಆಸೀಸ್ ತಂಡದ ವಿರುದ್ಧ 4 ಪಂದ್ಯಗಳ ಸರಣಿಯನ್ನು 2-1ರಲ್ಲಿ ಗೆದ್ದು ದಾಖಲೆ ಬರೆದರೆ ಮತ್ತೆ ತವರಿನಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ 3-1ರಲ್ಲಿ ಗೆದ್ದು ಅಗ್ರಸ್ಥಾನಿಯಾಗಿ ಫೈನಲ್ ಪ್ರವೇಶ ಪಡೆದಿದೆ.