ದುಬೈ:ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೊಮ್ಮೆ ಇಂದು ಸೆಣಸಾಡಲಿವೆ. ನಾಕೌಟ್ ಪಂದ್ಯದಲ್ಲಿ ಭಾರತ ವಿರುದ್ಧ ಸೋತಿದ್ದ ಪಾಕಿಸ್ತಾನ ಸೂಪರ್ 4 ಹಂತದಲ್ಲಿ ಗೆಲ್ಲುವ ಪ್ಲಾನ್ ಮಾಡಿದೆ. ಕಳೆದ ಭಾನುವಾರ ಕ್ರಿಕೆಟ್ ರಸದೌತಣ ಉಂಡಿದ್ದ ಅಭಿಮಾನಿಗಳು ಮತ್ತೊಂದು "ಸೂಪರ್ ಸಂಡೇ" ಸವಿಯಲಿದ್ದಾರೆ.
ಉಭಯ ತಂಡಗಳು ಸೂಪರ್ 4 ಹಂತದಲ್ಲಿ ಗೆಲುವಿನ ಆರಂಭ ಪಡೆಯುವ ಹುಮ್ಮಸ್ಸಿನಲ್ಲಿವೆ. ಭಾರತ ವಿರುದ್ಧ ಸೋತಿದ್ದ ಪಾಕಿಸ್ತಾನ ಹಾಂಗ್ಕಾಂಗ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಸೂಪರ್ 4 ಹಂತಕ್ಕೆ ಬಂದಿದೆ. ಭಾರತ ವಿರುದ್ಧ 150 ರನ್ ಮಾಡಿದ್ದ ಹಾಂಗ್ಕಾಂಗ್ ಪಾಕ್ ಬೌಲರ್ಗಳ ಕರಾರುವಾಕ್ ದಾಳಿಗೆ ಕೇವಲ 38 ರನ್ಗಳಿಗೆ ಪತನ ಕಂಡಿತ್ತು. ಇದು ಪಾಕ್ ಆಟಗಾರರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.
ಮೊದಲ ಪಂದ್ಯದ ಸೋಲಿಗೆ ಪ್ರತೀಕಾರ ಮತ್ತು ಹಾಂಗ್ಕಾಂಗ್ ವಿರುದ್ಧ ಭರ್ಜರಿ ಗೆಲುವನ್ನು ಮುಂದುವರಿಸಲು ಪಾಕ್ ಯೋಜನೆ ರೂಪಿಸಿದೆ. ನಾಕೌಟ್ ಹಂತದಲ್ಲಿ 2 ಪಂದ್ಯಗಳನ್ನು ಗೆದ್ದಿರುವ ಭಾರತ ಈ ಪಂದ್ಯದಲ್ಲೂ ಪಾಕಿಸ್ತಾನವನ್ನು ಕೆಡವಲು ಸಜ್ಜಾಗಿದೆ.
ಭಾರತ ಪಾಕ್ ತಂಡಗಳಿಗೆ ಗಾಯದ ಬರೆ:ಎರಡೂ ತಂಡಗಳಿಗೆ ಗಾಯದ ಸಮಸ್ಯೆ ತಲೆದೋರಿದೆ. ಮೊಣಕಾಲಿನ ಗಾಯದಿಂದ ಭಾರತದ ರವೀಂದ್ರ ಜಡೇಜಾ ಏಷ್ಯಾಕಪ್‌ನಿಂದಲೇ ಹೊರಗುಳಿದಿದ್ದರೆ, ಪಾಕಿಸ್ತಾನದ ವೇಗಿ ಶಹನವಾಜ್ ದಹಾನಿ ಅವರು ಮೊಣಕೈ ಗಾಯದಿಂದ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಜಡೇಜಾ ಬದಲಿಗೆ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದು, ಆಡುವ ಹನ್ನೊಂದರಲ್ಲಿಯೂ ಅವಕಾಶ ಪಡೆಯಲಿದ್ದಾರೆ ಎನ್ನಲಾಗಿದೆ. ಪಾಕ್ ವಿರುದ್ಧದ ಮೊದಲ ಪಂದ್ಯ ಮಿಸ್ ಮಾಡಿಕೊಂಡಿದ್ದ ರಿಷಬ್ ಪಂತ್ ಈ ಪಂದ್ಯದಲ್ಲಿ ಆಡಲಿದ್ದಾರೆ. ದಿನೇಶ್ ಕಾರ್ತಿಕ್ ಬದಲಿಗೆ ದೀಪಕ್ ಹೂಡಾಗೆ ಚಾನ್ಸ್ ಸಿಗುವ ಸಾಧ್ಯತೆಯೂ ಇದೆ.
ಅಗ್ರ ಕ್ರಮಾಂಕದಲ್ಲಿ ಕೆ.ಎಲ್ ರಾಹುಲ್, ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮಿಂಚಬೇಕಿದೆ. ಹಾಂಗ್ಕಾಂಗ್ ವಿರುದ್ಧ ಅರ್ಧಶತಕ ಸಿಡಿಸಿದ್ದ ಕೊಹ್ಲಿ ಈ ಪಂದ್ಯದಲ್ಲೂ ರನ್ ಗಳಿಸುವ ನಿರೀಕ್ಷೆ ಹೊಂದಿದ್ದಾರೆ. ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಮತ್ತೊಂದು ಮಿಂಚಿನ ಪ್ರದರ್ಶನಕ್ಕೆ ರೆಡಿಯಾಗಿದ್ದಾರೆ.