ಗುವಾಹಟಿ :ಇಲ್ಲಿನಬರ್ಸಾಪರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟಿ 20 ಪಂದ್ಯ ಇಂದು ನಡೆಯಲಿದೆ. ಕೇರಳದ ಗೆಲುವಿನ ಓಟವನ್ನು ಮುಂದುವರೆಸಿ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿ ಭಾರತ ತಂಡ ಇದೆ. ಜಸ್ಪ್ರೀತ್ ಬುಮ್ರಾ ಗಾಯದ ಕಾರಣ ತಂಡದಿಂದ ಹೊರಗುಳಿದ್ದಿದ್ದಾರೆ. ಅವರ ಜಾಗಕ್ಕೆ ಮೊಹಮ್ಮದ್ ಸಿರಾಜ್ರನ್ನು ಆಯ್ಕೆ ಮಾಡಲಾಗಿದೆ.
ಟಿ-20 ವಿಶ್ವಕಪ್ಗೂ ಮುನ್ನ ಬಲಿಷ್ಠ ಬೌಲಿಂಗ್ ಪಡೆಯನ್ನು ಕಟ್ಟಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಬುಮ್ರಾ ಅನುಪಸ್ಥಿತಿ ಕಾಡಲಿದೆ. ಏಷ್ಯಾ ಕಪ್ನಲ್ಲಿ ಕಳಪೆ ಬೌಲಿಂಗ್ನಿಂದ ತಂಡ ಟೀಕೆಗೆ ಗುರಿಯಾಗಿತ್ತು. ಆಸ್ಟ್ರೇಲಿಯಾದ ಎದುರು ಸಹ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿತ್ತು. ದಕ್ಷಿಣ ಆಫ್ರಿಕಾದ ಎದುರು ಕೆರಳದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬೌಲಿಂಗ್ ಪ್ರದರ್ಶನ ಉತ್ತಮವಾಗಿತ್ತು.
ಕಾಡುತ್ತಿರುವ ಅಂತಿಮ ಓವರ್ಗಳು :15ನೇ ಓವರ್ ನಂತರ ಭಾರತದ ಬೌಲರ್ಗಳು ದುಬಾರಿಯಾಗುತ್ತಿರುವುದು ಸಮಸ್ಯೆಯಾಗಿದೆ. ಡೆತ್ ಓವರ್ನಲ್ಲಿ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತಿಲ್ಲ. ಭುವನೇಶ್ವರ್ ಕುಮಾರ್ ಅವರ 19ನೇ ಓವರ್ ಎರಡು ಪಂದ್ಯಗಳಲ್ಲಿ ದುಬಾರಿಯಾಗಿ ಟೀಕೆಗೆ ಗುರಿಯಾಗಿತ್ತು.
ಬ್ಯಾಟಿಂಗ್ನಲ್ಲಿ ಕನ್ಸಿಸ್ಟೆಂಸಿ ಕೊರತೆ :ಆರಂಭಿಕ ಬ್ಯಾಟರ್ಗಳಿಂದ ಉತ್ತಮ ಜೊತೆಯಾಟ ಬರದೇ ತುಂಬಾ ಪಂದ್ಯಗಳಾಯಿತು. ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ರಾಹುಲ್ರಿಂದ ಉತ್ತಮ ಆರಂಭ ಬೇಕಿದೆ. ನಂತರ ಬರುವ ವಿರಾಟ್ ಕೊಹ್ಲಿ ಸಹ ಅಲ್ಲಲ್ಲಿ ಆಡುತ್ತಿದ್ದಾರೆ. ಆರಂಭಿಕ ಮೂವರಲ್ಲೂ ನಿರಂತರತೆ ಇರದಿರುವು ತಂಡಕ್ಕೆ ಮೈನಸ್ ಆಗಿದೆ.
ಸೂರ್ಯನ ಆಸರೆ : ಸೂರ್ಯ ಕುಮಾರ್ ಯಾದವ್ ಉತ್ತಮ ಪ್ರದರ್ಶನ ನೀಡುತ್ತಾ ಬರುತ್ತಿದ್ದಾರೆ. ತಂಡ ಅವರ ಮೇಲೆಯೇ ಹೆಚ್ಚು ಅವಲಂಭಿತವಾಗಿದೆ. ಸೂರ್ಯ ಅವರ ಈ ಫಾರ್ಮ್ ವಿಶ್ವ ಕಪ್ ವರೆಗೆ ಮುಂದುವರೆಯ ಬೇಕಿದೆ. ಲೋಯರ್ ಆರ್ಡರ್ನಲ್ಲಿ ರಿಷಬ್ ಪಂತ್, ದಿನೇಶ್ ಕಾರ್ತಿಕ್ ರನ್ನು ಆಡಿಸುತ್ತಿದ್ದಾರೆ. ರಿಷಬ್ ಕೀಪಿಂಗ್ ಮಾಡಿದರೂ ಕಾರ್ತಿಕ್ರನ್ನು ಪ್ಲೇಯರ್ ಆಗಿ ತಂಡ ಉಳಿಸಿ ಕೊಂಡಿದೆ.
ವಿಶ್ವ ಕಪ್ ಹಿನ್ನಲೆಯಲ್ಲಿ ಬೌಲರ್ಗಳ ನಡುವೆ ಸ್ಪರ್ಧೆ :ಬೌಲಿಂಗ್ನಲ್ಲಿ ದೀಪಕ್ ಚಹಾರ್ ಮತ್ತುಅರ್ಷದೀಪ್ ಸಿಂಗ್ ಕೊಂಚ ಭರವಸೆ ಮೂಡಿಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಮೂರು ವಿಕೆಟ್ ಕಿತ್ತು ಅರ್ಷದೀಪ್ ಸಿಂಗ್ ಪಂದ್ಯ ಶ್ರೇಷ್ಠಕ್ಕೆ ಭಾಜೀನರಾದರು. ದೀಪಕ್ ಚಹಾರ್ 6 ಎಕಾನಮಿ ರೇಟ್ನೊಂದಿಗೆ 24ರನ್ ಬಿಟ್ಟು ಕೊಟ್ಟು 2 ವಿಕೆಟ್ ಪಡೆದು ಮಿಂಚಿದ್ದರು. ಹರ್ಷಲ್ ಪಟೇಲ್ ಸಹ ಎರಡು ವಿಕೆಟ್ ಪಡೆದಿರುವುದು ಬೌಲಿಂಗ್ ವಿಭಾಗದ ಚೇತರಿಕೆಯಾಗಿದೆ. ವಿಶ್ವ ಕಪ್ನಿಂದ ಬುಮ್ರಾ ಹೊರಗುಳಿದರೆ ಆ ಜಾಗಕ್ಕೆ ಯಾರು ಆಯ್ಕೆ ಆಗುತ್ತಾರೆ ಎಂಬುದಕ್ಕೆ ಈ ಸರಣಿ ಮುಖ್ಯವಾಗಲಿದೆ.