ನಾಟಿಂಗ್ಹ್ಯಾಮ್: ಮಳೆಯ ಕಾರಣ ಮೊದಲ ಪಂದ್ಯದ ಕೊನೆಯ ದಿನ ಸಂಪೂರ್ಣ ರದ್ದಾಗಿದ್ದು, ಪಂದ್ಯ ನೀರಸ ಡ್ರಾನಲ್ಲಿ ಅಂತ್ಯವಾಗಿದೆ. ಮೊದಲ ಪಂದ್ಯವನ್ನು ಗೆದ್ದು ಸರಣಿ ಮುನ್ನಡೆ ಸಾಧಿಸುವ ಭಾರತದ ಆಸೆ ಮಣ್ಣುಪಾಲಾಗಿದೆ.
ವಿರಾಟ್ ಕೊಹ್ಲಿ ಪಡೆಗೆ ಅತಿಥೇಯ ಆಂಗ್ಲರು 209 ರನ್ಗಳ ಗುರಿ ನೀಡಿದ್ದು, 4ನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ಒಂದು ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತ್ತು. ಕೊನೆಯ ದಿನ ಗೆಲ್ಲಲು ಭಾರತಕ್ಕೆ 157 ರನ್ಗಳನ್ನು ಅವಶ್ಯಕತೆಯಿತ್ತು. ಭಾರತದ ಕೈಯಲ್ಲಿ ಇನ್ನೂ 9 ವಿಕೆಟ್ಗಳು ಉಳಿದಿದ್ದರಿಂದ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಮಳೆ ಕೊಹ್ಲಿ ಪಡೆಯ ಆಸೆಯನ್ನು ಮಣ್ಣಪಾಲು ಮಾಡಿದೆ.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ ಭಾರತದ ದಾಳಿಗೆ ತತ್ತರಿಸಿ 183ರನ್ಗಳಿಗೆ ಆಲೌಟ್ ಆಗಿತ್ತು. ಬುಮ್ರಾ 4, ಶಮಿ 3 ಮತ್ತು ಶಾರ್ದುಲ್ ಠಾಕೂರ್ 2 ವಿಕೆಟ್ ಪಡೆದಿದ್ದರು. ಅದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ್ದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 278 ರನ್ಗಳಿಸಿ 95 ರನ್ಗಳ ಮುನ್ನಡೆ ಸಾಧಿಸಿತ್ತು. ಭಾರತ ತಂಡ ರಾಹುಲ್ 84, ರವೀಂದ್ರ ಜಡೇಜಾ 56 ರನ್ ಗಳಿಸಿದ್ದರು.