ಮುಂಬೈ(ಮಹಾರಾಷ್ಟ್ರ):ಏಕದಿನ ವಿಶ್ವಕಪ್ ಕ್ರಿಕೆಟ್‌ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಸೋಲು ಅನುಭವಿಸಿದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರು ಅತ್ಯುತ್ತಮ ಪ್ರದರ್ಶನ ನೀಡಿದ ಮೆನ್ ಇನ್ ಬ್ಲೂ ತಂಡವನ್ನು ಶ್ಲಾಘಿಸಿದ್ದಾರೆ. ''ಆತಿಥೇಯರು ಗೆಲುವಿಗೆ ಅರ್ಹರು. ಅವರು ಅತ್ಯುತ್ತಮ ಕ್ರಿಕೆಟ್ ಆಡಿದರು" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
''ನಾನು ಮೊದಲಿಗೆ ಭಾರತವನ್ನು ಅಭಿನಂದಿಸಲು ಬಯಸುತ್ತೇನೆ. ಸೆಮಿಫೈನಲ್ನಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದರು. ಟೀಂ ಇಂಡಿಯಾ ವಿಶ್ವದಲ್ಲೇ ಅಗ್ರ ತಂಡವಾಗಿದ್ದು, ಅಗ್ರ ಕ್ರಿಕೆಟ್ ಆಡಿದ್ದಾರೆ'' ಎಂದು ವಿಲಿಯಮ್ಸನ್ ಅಭಿಪ್ರಾಯಪಟ್ಟರು.
ವಾಂಖೆಡೆ ಸ್ಟೇಡಿಯಂನಲ್ಲಿ ಕೊಹ್ಲಿಯ 'ವಿರಾಟ್' ಬ್ಯಾಟಿಂಗ್ ಪ್ರದರ್ಶನ, ಮೊಹಮ್ಮದ್ ಶಮಿ ಬೌಲಿಂಗ್ ಅಬ್ಬರದ ಮೂಲಕ ಟೀಂ ಇಂಡಿಯಾ ಟೂರ್ನಿಯ ಪ್ರಶಸ್ತಿ ಸುತ್ತು ಪ್ರವೇಶಿಸಿತು.
"ನಾವು ಕೊನೆಯ ಹಂತದವರೆಗೂ ಹೋರಾಡಿದ್ದು ಸಂತೋಷವಾಗಿದೆ. ಆದರೆ, ಮತ್ತೊಮ್ಮೆ ನಾಕ್‌ಔಟ್ ಹಂತದಿಂದ ಹೊರಬಿದ್ದಿದ್ದಕ್ಕೆ ದುಃಖವಾಯಿತು. ನಾವು ತುಂಬಾ ಪ್ರಯತ್ನಿಸಿದೆವು. ಆದರೆ, ಭಾರತ ಉನ್ನತ ದರ್ಜೆಯ ತಂಡ'' ಎಂದರು.
''ವಿಶ್ವ ದರ್ಜೆಯ ಭಾರತದ ಬ್ಯಾಟರ್‌ಗಳು ತಮ್ಮ ಅದ್ಭುತ ಆಟ ತೋರಿಸಿದ್ದಾರೆ. ತಂಡವು 397 ರನ್ ಗಳಿಸಿತು. ಚೆಂಡು ಹೆಚ್ಚು ಚಲಿಸುತ್ತಿದ್ದರಿಂದ ಗುರಿ ಬೆನ್ನಟ್ಟುವುದು ಕಷ್ಟಕರವಾಗಿತ್ತು. ಭಾರತ ನಮಗೆ ಯಾವುದೇ ಅವಕಾಶ ನೀಡಲಿಲ್ಲ. ಆ ತಂಡಕ್ಕೆ ಅಭಿಮಾನಿಗಳಿಂದಲೂ ಅದ್ಭುತ ಬೆಂಬಲ ಸಿಕ್ತು. ಟೂರ್ನಿಯಲ್ಲಿ ನಮ್ಮ ತಂಡದ ರಚಿನ್ ಮತ್ತು ಮಿಷೆಲ್ ಪ್ರಯತ್ನಗಳು ವಿಶೇಷವಾಗಿತ್ತು. ನಾವು ಸಾಕಷ್ಟು ಹೋರಾಡಿದ್ದೇವೆ. ಭಾರತದ ಆಟಗಾರರು ನಿಜವಾಗಿಯೂ ಚೆನ್ನಾಗಿ ಆಡಿದರು. ಟೀ ಇಂಡಿಯಾದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ'' ಎಂದು ವಿಲಿಯಮ್ಸನ್ ಶ್ಲಾಘಿಸಿದರು.
ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ 2ನೇ ಸೆಮಿಫೈನಲ್ ಇಂದು:ಭಾರತ ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಿಗದಿಯಾಗಿದೆ. ಇಂದು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ.
ಇದನ್ನೂ ಓದಿ:ಶಮಿ ಬೌಲಿಂಗ್ ಬ್ರಿಲಿಯಂಟ್, ಕೊಹ್ಲಿ ಬ್ಯಾಟಿಂಗ್ ಸೂಪರ್: ರೋಹಿತ್ ಶರ್ಮಾ ಮೆಚ್ಚುಗೆ