ಲಖನೌ:ಸಂಘಂಟಿತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ತೋರಿದ ಭಾರತ ತಂಡ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯವನ್ನು 62 ರನ್ಗಳ ಅಂತರದಿಂದ ಗೆದ್ದು ಬೀಗಿದೆ.
ಲಖನೌದ ಅಟಲ್ ವಾಜಪಾಯಿ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 2 ವಿಕೆಟ್ ಕಳೆದುಕೊಂಡು 199 ರನ್ಗಳಿಸಿತ್ತು. ರೋಹಿತ್ ಶರ್ಮಾ 32 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 44, ಇಶಾನ್ ಕಿಶನ್ 56 ಎಸೆತಗಳಲ್ಲಿ 10 ಬೌಂಡರಿ,3 ಸಿಕ್ಸರ್ ಸಹಿತ 89 ಮತ್ತು ಶ್ರೇಯಸ್ ಅಯ್ಯರ್ 28 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 57 ರನ್ಗಳಿಸಿದ್ದರು.
ಭಾರತ ನೀಡಿದ್ದ 200 ರನ್ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಯಾವುದೇ ಹಂತದಲ್ಲಿ ಭಾರತೀಯ ಬೌಲರ್ಗಳಿಗೆ ಸವಾಲಾಗಲಿಲ್ಲ. 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 137 ರನ್ಗಳಿಸಿತ್ತು.
ಚರಿತ್ ಅಸಲಂಕಾ 47 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯ 53 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಆರಂಭಿಕ ಪಾತುನ್ ನಿಸ್ಸಾಂಕ 0, ಕಮಿಲ್ ಮಿಶ್ರಾ 13, ಜನಿತ್ ಲಿಯಾಂಗೆ 11, ದಿನೇಶ್ ಚಂಡಿಮಾಲ್ 10, ದಸುನ್ ಶನಕ3, ಚಮಿಕಾ ಕರುಣರತ್ನೆ 21, ದುಷ್ಮಂತ ಚಮೀರಾ ಅಜೇಯ 24 ರನ್ಗಳಿಸಿದರು.
ಭುವನೇಶ್ವರ್ ಕುಮಾರ್ 2 ಓವರ್ಗಳಲ್ಲಿ 9 ರನ್ ನೀಡಿ 2 ವಿಕೆಟ್ ಪಡೆದರೆ, ವೆಂಕಟೇಶ್ ಅಯ್ಯರ್ 3 ಓವರ್ಗಳಲ್ಲಿ 36 ರನ್ ನೀಡಿ 2 ವಿಕೆಟ್, ರವೀಂದ್ರ ಜಡೇಜಾ 28ಕ್ಕೆ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
2 ಮತ್ತು 3ನೇ ಟಿ20 ಪಂದ್ಯಗಳು ಶನಿವಾರ ಮತ್ತು ಭಾನುವಾರ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಇದನ್ನೂ ಓದಿ:ಆರ್ಸಿಬಿ ನಾಯಕತ್ವ ತ್ಯಜಿಸಿದ್ದಕ್ಕೆ ಕೊನೆಗೂ ಕಾರಣ ಬಹಿರಂಗ ಪಡಿಸಿದ ವಿರಾಟ್ ಕೊಹ್ಲಿ!