ಮುಂಬೈ: ಯುಎಇಯಲ್ಲಿ ನಿಗದಿಯಾಗಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಆರಂಭಿಕ ಅಭಿಯಾನಕ್ಕೆ ಕೆಲವೇ ದಿನಗಳ ಮೊದಲು ಕಹಿ ಸುದ್ದಿ ಹೊರಬಿದ್ದಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಸೋಂಕು ದೃಢಪಟ್ಟಿದೆ ಎಂದು ಬಿಸಿಸಿಐ ಹೇಳಿದೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಾಗಿ ದ್ರಾವಿಡ್ ಪ್ರಯಾಣಿಸಲಿಲ್ಲ. ಕೆ ಎಲ್ ರಾಹುಲ್ ನೇತೃತ್ವದ ತಂಡವು 3-0 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ. ಬಿಡುವಿಲ್ಲದ ಅಂತಾರಾಷ್ಟ್ರೀಯ ವೇಳಾಪಟ್ಟಿಯಿಂದಾಗಿ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಸೇರಿದಂತೆ ಕೋಚಿಂಗ್ ಸಿಬ್ಬಂದಿಗೆ ಆಯ್ಕೆ ಸಮಿತಿಯು ವಿಶ್ರಾಂತಿ ನೀಡಿತ್ತು.