ದುಬೈ:ಏಷ್ಯಾ ಕಪ್ 2022 ಟೂರ್ನಿಯಲ್ಲಿ ಸಿಕ್ಸರ್, ಫೋರ್ಗಳ ಸುರಿಮಳೆಯಾಗುವುದು ಬಹುತೇಕ ಖಚಿತ. ಬಹುನಿರೀಕ್ಷಿತ ಟೂರ್ನಿ ಕೇವಲ 20 ಓವರ್ಗಳಿಗೆ ಸೀಮಿತವಾಗಿರುವ ಕಾರಣ ಎಲ್ಲ ಪ್ಲೇಯರ್ಸ್ ದೊಡ್ಡ ದೊಡ್ಡ ಹೊಡೆತಗಳಿಗೆ ಕೈ ಹಾಕಲಿದ್ದಾರೆ. ಹೀಗಾಗಿ, ಏಷ್ಯಾ ಕಪ್‌ನಲ್ಲಿ ನಿರ್ಮಾಣಗೊಂಡಿರುವ ಕೆಲವೊಂದು ದಾಖಲೆ ಬ್ರೇಕ್ ಆಗುವುದು ಬಹುತೇಕ ಖಚಿತ. ಸದ್ಯ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಪಾಕಿಸ್ತಾನದ ಶಾಹಿದ್ ಆಫ್ರಿದಿ ರೆಕಾರ್ಡ್ ಮೇಲೆ ಕಣ್ಣಿಟ್ಟಿದ್ದಾರೆ.
ಏಷ್ಯಾಕಪ್ನಲ್ಲಿ ಅಬ್ಬರಿಸಲು ಸಜ್ಜಾಗಿರುವ ರೋಹಿತ್, ಕೊಹ್ಲಿ ಆಗಸ್ಟ್ 27ರಿಂದ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದ್ದು, ಮರುದಿನ ಅಂದರೆ ಆಗಸ್ಟ್ 28ರಂದು ಸಾಂಪ್ರದಾಯಿಕ ಎದುರಾಳಿ ತಂಡಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಎಲ್ಲರ ಕಣ್ಣು ಈ ಪಂದ್ಯದ ಮೇಲೆ ನೆಟ್ಟಿದೆ. ಆದರೆ, ನಾಯಕ ರೋಹಿತ್ ಶರ್ಮಾ ಹೊಸ ಮೈಲಿಗಲ್ಲು ಸೃಷ್ಟಿಸುವ ತವಕದಲ್ಲಿದ್ದಾರೆ.
ಇದನ್ನೂ ಓದಿ:Asia Cup 2022: ಪಾಕಿಸ್ತಾನ ಕ್ಯಾಪ್ಟನ್ ಬಾಬರ್ ಆಜಂ ಭೇಟಿ ಮಾಡಿದ ವಿರಾಟ್ ಕೊಹ್ಲಿ
ಏಷ್ಯಾ ಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಸಾಲಿನಲ್ಲಿ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಆಫ್ರಿದಿ ಇದ್ದಾರೆ. ಆದರೆ, ಈ ಸಲದ ಟೂರ್ನಿಯಲ್ಲಿ ಆ ರೆಕಾರ್ಡ್ ಬ್ರೇಕ್ ಮಾಡಲು ರೋಹಿತ್ ಶರ್ಮಾ ಬಳಿ ಒಳ್ಳೆಯ ಅವಕಾಶವಿದೆ. ಆಫ್ರಿದಿ ಆಡಿರುವ 27 ಪಂದ್ಯಗಳಿಂದ 26 ಸಿಕ್ಸರ್ ಸಿಡಿಸಿ ಅಗ್ರಸ್ಥಾನದಲ್ಲಿದ್ದು, ಈ ಸಾಧನೆ ಅಳಿಸಿ ಹಾಕಲು ಹಿಟ್ಮ್ಯಾನ್ಗೆ ಕೇವಲ 6 ಸಿಕ್ಸರ್ಗಳ ಅವಶ್ಯಕತೆ ಇದೆ. ಏಷ್ಯಾಕಪ್ನಲ್ಲಿ 28ನೇ ಪಂದ್ಯ ಆಡಲಿರುವ ರೋಹಿತ್ ಶರ್ಮಾ, ಟಿ20 ಮಾದರಿಯಲ್ಲಿ ಪಾಕ್ ವಿರುದ್ಧ ಮೊದಲ ಸಲ ಭಾರತ ತಂಡ ಮುನ್ನಡೆಸಲಿದ್ದಾರೆ ಎಂಬುದು ವಿಶೇಷವಾಗಿದೆ.
ಏಷ್ಯಾಕಪ್ನಲ್ಲಿ ಅತಿ ಹೆಚ್ಚು ಸಿಕ್ಸರ್
- ಶಾಹಿದ್ ಅಫ್ರಿದಿ (ಪಾಕಿಸ್ತಾನ) 26 ಸಿಕ್ಸರ್
- ಸನತ್ ಜಯಸೂರ್ಯ (ಶ್ರೀಲಂಕಾ) 23 ಸಿಕ್ಸರ್
- ರೋಹಿತ್ ಶರ್ಮಾ (ಭಾರತ) 21 ಸಿಕ್ಸರ್
- ಸುರೇಶ್ ರೈನಾ (ಭಾರತ) 18 ಸಿಕ್ಸರ್
- ಎಂಎಸ್ ಧೋನಿ 16 ಸಿಕ್ಸರ್
ಇದರ ಜೊತೆಗೆ, ಏಷ್ಯಾಕಪ್ನಲ್ಲಿ ಸಾವಿರ ರನ್ ಗಳಿಸುವ ಮೊದಲ ಭಾರತದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ರೋಹಿತ್ ಬಳಿ ಉತ್ತಮ ಅವಕಾಶವಿದೆ. ಈಗಾಗಲೇ ತಾವು ಆಡಿರುವ 27 ಪಂದ್ಯಗಳಿಂದ 883 ರನ್ಗಳಿಸಿದ್ದು, ಈ ಸರಣಿಯಲ್ಲಿ ಸಾವಿರ ರನ್ ಪೂರೈಕೆ ಮಾಡುವ ತವಕದಲ್ಲಿದ್ದಾರೆ. ಈಗಾಗಲೇ ಏಷ್ಯಾ ಕಪ್‌ನಲ್ಲಿ ಭಾರತದ ಸಚಿನ್ ತೆಂಡೂಲ್ಕರ್ 23 ಪಂದ್ಯಗಳಿಂದ 971 ರನ್ಗಳಿಸಿದ್ದಾರೆ. ಆದರೆ, ಶ್ರೀಲಂಕಾದ ಮಾಜಿ ಆಟಗಾರ ಸನತ್ ಜಯಸೂರ್ಯ ಆಡಿರುವ 25 ಪಂದ್ಯಗಳಿಂದ 1,220 ರನ್ಗಳಿಸಿದ್ದಾರೆ. ತದನಂತರ ಕುಮಾರ್ ಸಂಗಕ್ಕರ 24 ಪಂದ್ಯಗಳಿಂದ 1075 ರನ್ಗಳಿಸಿದ್ದಾರೆ. ಇನ್ನೂ 766 ರನ್ಗಳಿಕೆ ಮಾಡಿರುವ ವಿರಾಟ್ ಕೊಹ್ಲಿ ಬಳಿ ಕೂಡ ಉತ್ತಮ ಅವಕಾಶವಿದ್ದು, ಕಳಪೆ ಬ್ಯಾಟಿಂಗ್ನಿಂದ ಹೊರಬಂದರೆ ರೆಕಾರ್ಡ್ ಬರೆಯುವುದು ಬಹುತೇಕ ಖಚಿತವಾಗಿದೆ.
ಏಷ್ಯಾ ಕಪ್‌ನಲ್ಲಿ ಅತಿ ಹೆಚ್ಚು ರನ್ಗಳಿಸಿರುವ ಪ್ಲೇಯರ್ಸ್
- ಸನತ್ ಜಯಸೂರ್ಯ (ಶ್ರೀಲಂಕಾ) 1220ರನ್
- ಕುಮಾರ್ ಸಂಗಕ್ಕರ (ಶ್ರೀಲಂಕಾ) 1075 ರನ್
- ಸಚಿನ್ ತೆಂಡೂಲ್ಕರ್ (ಭಾರತ) 971 ರನ್
- ಶೋಯೆಬ್ ಮಲಿಕ್ (ಪಾಕಿಸ್ತಾನ) 907 ರನ್
- ರೋಹಿತ್ ಶರ್ಮಾ (ಭಾರತ) 883 ರನ್
- ವಿರಾಟ್ ಕೊಹ್ಲಿ (ಭಾರತ) 766 ರನ್
ಅಬ್ಬರದ ಅಭ್ಯಾಸ ಆರಂಭಿಸಿರುವ ರೋಹಿತ್: ಪಾಕ್ ವಿರುದ್ಧದ ಪಂದ್ಯ ಆರಂಭಗೊಳ್ಳಲು ಕೇವಲ ಎರಡು ದಿನ ಬಾಕಿ ಉಳಿದಿರುವ ಕಾರಣ ರೋಹಿತ್ ಶರ್ಮಾ ನೆಟ್ನಲ್ಲಿ ಬೆವರು ಹರಿಸುತ್ತಿದ್ದಾರೆ. ಟೀಂ ಇಂಡಿಯಾದ ಪ್ರಮುಖ ಬೌಲರ್ ಎದುರಿಸುತ್ತಿದ್ದು, ದೊಡ್ಡ ದೊಡ್ಡ ಹೊಡೆತಗಳಿಗೆ ಕೈಹಾಕುತ್ತಿದ್ದಾರೆ. ಪ್ರಮುಖವಾಗಿ ರವೀಂದ್ರ ಜಡೇಜಾ, ಆರ್ .ಅಶ್ವಿನ್, ಆವೇಶ್ ಖಾನ್ ಸೇರಿದಂತೆ ಪ್ರಮುಖ ಬೌಲರ್ಗಳು ಇವರಿಗೆ ಬೌಲಿಂಗ್ ಮಾಡಿದರು.