ಕರ್ನಾಟಕ

karnataka

ETV Bharat / sports

IND vs ZIM 3rd ODI: ಕೊನೆ ಪಂದ್ಯದಲ್ಲಿ ಹೋರಾಡಿ ಸೋತ ಜಿಂಬಾಬ್ವೆ.. ಸರಣಿ ಕ್ಲೀನ್​ ಸ್ವೀಪ್ ಮಾಡಿದ ಭಾರತ - Etv bharat kannada

ಆತಿಥೇಯ ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಕ್ಲೀನ್​ ಸ್ವೀಪ್ ಸಾಧನೆ ಮಾಡಿದೆ.

IND vs ZIM 3rd ODI
IND vs ZIM 3rd ODI

By

Published : Aug 22, 2022, 9:05 PM IST

Updated : Aug 22, 2022, 9:28 PM IST

ಹರಾರೆ:ಜಿಂಬಾಬ್ವೆ ವಿರುದ್ಧ ಸೋಲಿಲ್ಲದ ಸರದಾರನಾಗಿ ಗುರುತಿಸಿಕೊಂಡಿರುವ ಟೀಂ ಇಂಡಿಯಾ ಮೂರು ಏಕದಿನ ಪಂದ್ಯಗಳ ಸರಣಿ ಕ್ಲೀನ್​ ಸ್ವೀಪ್ ಸಾಧನೆ ಮಾಡಿದೆ. ಕೊನೆಯ ಪಂದ್ಯದಲ್ಲಿ 13ರನ್​​ಗಳ ರೋಚಕ ಗೆಲುವು ದಾಖಲಿಸಿರುವ ಯಂಗ್ ಇಂಡಿಯಾ, ಆತಿಥೇಯರ ವಿರುದ್ಧ ಸತತ ಗೆಲುವಿನ ನಾಗಾಲೋಟ ಮುಂದುವರೆಸಿದೆ.

ಜಿಂಬಾಬ್ವೆ ರಾಜಧಾನಿ ಹರಾರೆ ಸ್ಫೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ 13 ರನ್​ಗಳ ಗೆಲುವು ದಾಖಲು ಮಾಡಿದೆ. ಕೊನೆಯ ಓವರ್​​ವರೆಗೆ ಹೋರಾಟ ನಡೆಸಿದ ಜಿಂಬಾಬ್ವೆ ಗೆಲುವಿನ ಕನಸು ಮಾತ್ರ ಯಶಸ್ವಿಯಾಗಲಿಲ್ಲ. ತಂಡದ ಪರ ಮಿಂಚಿದ ಅನುಭವಿ ಬ್ಯಾಟರ್ ಸಿಕಂದರ್​​ ರಾಜಾ(115) ಹೋರಾಟ ವ್ಯರ್ಥವಾಯಿತು.

ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾದ ಬ್ಯಾಟರ್​ ಶುಬ್ಮನ್ ಗಿಲ್​​​​(130) ಚೊಚ್ಚಲ ಶತಕದ ನೆರವಿನಿಂದ ನಿಗದಿತ 50 ಓವರ್​​​ಗಳಲ್ಲಿ 8ವಿಕೆಟ್​ನಷ್ಟಕ್ಕೆ 289ರನ್​​​ಗಳಿಕೆ ಮಾಡಿತು. ಇದರ ಬೆನ್ನತ್ತಿದ್ದ ಜಿಂಬಾಬ್ವೆ ತಂಡ 49.3 ಓವರ್​​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 13ರನ್​ಗಳ ಸೋಲು ಕಂಡಿತು.

ಭಾರತದ ಇನ್ನಿಂಗ್ಸ್​​:ಕೊನೆಯ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಧವನ್​​-ರಾಹುಲ್ ಜೋಡಿ 63ರನ್​​ಗಳ ಜೊತೆಯಾಟವಾಡಿದರು. 30ರನ್​​​​ಗಳಿಕೆ ಮಾಡಿದ್ದ ವೇಳೆ ಕ್ಯಾಪ್ಟನ್ ಕೆ ಎಲ್​ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಧವನ್​ ಕೂಡ(40) ಬ್ರಾಂಡ್ ಇವನ್ಸ್​​ಗೆ ಬಲಿಯಾದರು.

ಗಿಲ್​​- ಕಿಶನ್​ ಜೊತೆಯಾಟ: ಆರಂಭಿಕ ಆಟಗಾರರ ಔಟಾದ ಬಳಿಕ ಒಂದಾದ ಗಿಲ್​​-ಕಿಶನ್ ಜೋಡಿ ತಂಡಕ್ಕೆ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಎದುರಾಳಿ ಬೌಲರ್​​ಗಳ ಮೇಲೆ ಸವಾರಿ ನಡೆಸಿದ ಈ ಜೋಡಿ 150+ರನ್​​​ಗಳ ಜೊತೆಯಾಟವಾಡಿದರು. ಈ ವೇಳೆ 50ರನ್​​​​​ಗಳಿಕೆ ಮಾಡಿದ್ದ ಕಿಶನ್​​​ ರನೌಟ್​ ಬಲೆಗೆ ಬಿದ್ದರು.

ಜಿಂಬಾಬ್ವೆಯಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್​​ ಮಾಡಿದ ಗಿಲ್​: ಜಿಂಬಾಬ್ವೆ ಬೌಲರ್​​ಗಳನ್ನ ಹಿಗ್ಗಾಮುಗ್ಗಾ ಥಳಿಸಿದ ಗಿಲ್​​ ದಾಖಲೆಯ 130ರನ್​​ಗಳಿಕೆ ಮಾಡಿದರು. ಜೊತೆಗೆ ಜಿಂಬಾಬ್ವೆ ನೆಲದಲ್ಲಿ 130ರನ್​ಗಳಿಸಿ ದಾಖಲೆ ಬರೆದರು. ಈ ಹಿಂದೆ 1998ರಲ್ಲಿ ಟೀಂ ಇಂಡಿಯಾ ಪರ ಸಚಿನ್ ತೆಂಡೂಲ್ಕರ್​ ಅಜೇಯ 127ರನ್​​​ಗಳಿಕೆ ಮಾಡಿದ್ದು, ಇಲ್ಲಿಯ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಇಂದಿನ ಪಂದ್ಯದಲ್ಲಿ ಗಿಲ್​ ಕೇವಲ 82 ಎಸೆತಗಳಲ್ಲಿ ಶತಕ ಸಿಡಿಸಿದರು.

ದಿಢೀರ್ ವಿಕೆಟ್ ಪತನ: ಇಶಾನ್ ಕಿಶನ್​ ಔಟಾಗುತ್ತಿದ್ದಂತೆ ಟೀಂ ಇಂಡಿಯಾದ ಬ್ಯಾಟರ್​ಗಳು ಪೆವಿಲಿಯನ್​ ಪರೇಡ್​ ನಡೆಸಿದರು. ದೀಪಕ್ ಹೂಡಾ(1), ಸ್ಯಾಮ್ಸನ್​(15), ಅಕ್ಸರ್ ಪಟೇಲ್​(1), ಶಾರ್ದೂಲ್ ಠಾಕೂರ್​(9)ರನ್​​ಗಳಿಸಿ ಔಟಾದರು. ತಂಡ ಕೊನೆಯದಾಗಿ 50 ಓವರ್​​​ಗಳಲ್ಲಿ 8ವಿಕೆಟ್​ ನಷ್ಟಕ್ಕೆ 289ರನ್​​ಗಳಿಕೆ ಮಾಡಿತು. ಜಿಂಬಾಬ್ವೆ ಪರ ಬ್ರಾಂಡ್​ ಎವಿನ್ಸ್​ ಐದು ವಿಕೆಟ್ ಪಡೆದರೆ, ಜಾಂಗ್ವೆ ಹಾಗೂ ವಿಕ್ಟರಿ ತಲಾ 1 ವಿಕೆಟ್ ಪಡೆದುಕೊಂಡರು.

ಜಿಂಬಾಬ್ವೆ ಇನ್ನಿಂಗ್ಸ್​​: ಟೀಂ ಇಂಡಿಯಾ ನೀಡಿದ್ದ 290ರನ್​​ಗಳ ಬೃಹತ್ ಗುರಿ ಬೆನ್ನತ್ತಿದ್ದ ಜಿಂಜಾಬ್ವೆ ಆರಂಭದಲ್ಲೇ ಮತ್ತೊಮ್ಮೆ ವೈಫಲ್ಯ ಅನುಭವಿಸಿತು. ಕೈಟಿನೋ-ಇನೊಸೆಟ್ ಜೋಡಿ ಟೀಂ ಇಂಡಿಯಾ ಬೌಲಿಂಗ್​ ಎದುರಿಸುವಲ್ಲಿ ಮತ್ತೊಮ್ಮೆ ವಿಫಲವಾಯಿತು. ಕೇವಲ 6ರನ್​​​ಗಳಿಸಿದ್ದ ಇನೊಸಿಟ್​ ಚಹರ್​ಗೆ ಬಲೆಯಾದರೆ, ಕೈಟಿನೋ(13) ಕುಲ್ದೀಪ್ ಯಾದವ್ ಬಲೆಗೆ ಬಿದ್ದರು. ಮಧ್ಯಮ ಕ್ರಮಾಂಕದಲ್ಲಿ ಸಿನಾ ವಿಲಿಮ್ಸ್​(45)ರನ್​, ಟೊನಿ(15)ರನ್​ಗಳಿಸಿದರು.

ಏಕಾಂಗಿಯಾಗಿ ಹೋರಾಡಿದ ಸಿಕಂದರ್ ರಾಜಾ:ಜಿಂಬಾಬ್ವೆ ಮೇಲಿಂದ ಮೇಲೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ, ಅನುಭವಿ ಬ್ಯಾಟರ್​ ಸಿಕಂದರ್​ ಏಕಾಂಗಿ ಹೋರಾಟ ನಡೆಸಿದರು. ಈ ಮೂಲಕ ಟೀಂ ಇಂಡಿಯಾದಲ್ಲಿ ಸೋಲಿನ ಛಾಯೆ ಮೂಡಿಸಿದರು. ಆದರೆ, 49ನೇ ಓವರ್​​ನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಈ ಪ್ಲೇಯರ್​​​ ತಾವು ಎದುರಿಸಿದ 95 ಎಸೆತಗಳಲ್ಲಿ 3 ಸಿಕ್ಸರ್, 9 ಬೌಂಡರಿ ಸೇರಿ 115ರನ್​​ಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಬ್ರಾಂಡ್ ಎವಿಸ್ ಕೂಡ 28ರನ್​​ಗಳಿಸಿದರು. ಆದರೆ, ಇವರ ವಿಕೆಟ್ ಪತನಗೊಳ್ಳುತ್ತಿದ್ದಂತೆ ಜಿಂಬಾಬ್ವೆ ಗೆಲುವಿನ ಕನಸು ಕೈಬಿಟ್ಟಿತು.

ಇದನ್ನೂ ಓದಿ:IND v s ZIM 3rd ODI: ಗಿಲ್​ ಸ್ಫೋಟಕ 130ರನ್​.. ಜಿಂಬಾಬ್ವೆ ಗೆಲುವಿಗೆ 290 ರನ್​ ಟಾರ್ಗೆಟ್​

ಟೀಂ ಇಂಡಿಯಾ ಪರ ಆವೇಶ್ ಖಾನ್​ 3 ವಿಕೆಟ್ ಪಡೆದುಕೊಂಡರೆ, ಕುಲ್ದೀಪ್ ಯಾದವ್​, ದೀಪಕ್ ಚಹರ್, ಅಕ್ಸರ್ ಪಟೇಲ್ ತಲಾ 2 ವಿಕೆಟ್​ ಹಾಗೂ ಶಾರ್ದೂಲ್ 1 ವಿಕೆಟ್ ಕಿತ್ತರು.

ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್​ಗಳ ಗೆಲುವು ದಾಖಲು ಮಾಡಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ 5 ವಿಕೆಟ್​​ಗಳ ಅಂತರದಿಂದ ಗೆದ್ದು, ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಗೆದ್ದಿತ್ತು. ಕೊನೆಯ ಪಂದ್ಯದಲ್ಲೂ ಜಯ ದಾಖಲಿಸಿ, ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ಜಿಂಬಾಬ್ವೆ ವಿರುದ್ಧ ಆಡಿರುವ ಯಾವುದೇ ಪಂದ್ಯದಲ್ಲಿ ಸೋಲು ಕಾಣದ ತಂಡವಾಗಿ ಹೊರಹೊಮ್ಮಿದೆ.

Last Updated : Aug 22, 2022, 9:28 PM IST

ABOUT THE AUTHOR

...view details