ಬಾರ್ಬಡೋಸ್:ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಏಕದಿನ ಕ್ರಿಕೆಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಟೀಂ ಇಂಡಿಯಾ 5 ವಿಕೆಟ್‌ಗಳಿಂದ ಗೆದ್ದಿದೆ. ಇಲ್ಲಿಯ ಬ್ರಿಡ್ಜ್ಟೌನ್ ಓವೆಲ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ವಿಂಡೀಸ್ 114 ರನ್‌ಗಳಿಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಭಾರತ 23 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 118 ರನ್ಗಳಿಸಿ ಜಯಿಸಿತು. ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ 1-0 ರಿಂದ ಮುನ್ನಡೆ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವಿಂಡೀಸ್ 45 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಟೆಸ್ಟ್ ಬಳಿಕ ತಂಡದ ಬ್ಯಾಟರ್‌ಗಳು ಏಕದಿನ ಸರಣಿಯಲ್ಲೂ ಕಳಪೆ ಪ್ರದರ್ಶನ ಮುಂದುವರೆಸಿದರು. ಆರಂಭದ ಏಳು ಓವರ್‌ಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ವೆಸ್ಟ್ ಇಂಡೀಸ್ ಆಟಗಾರರು ನಂತರ ಭಾರತದ ಸ್ಪಿನ್ನರ್ಗಳ ದಾಳಿಗೆ ಸಿಲುಕಿ ನಲುಗಿದರು. 7.4 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 45 ರನ್‌ಗಳನ್ನು ಕಲೆ ಹಾಕಿದ್ದ ವಿಂಡೀಸ್ ಉತ್ತಮ ಸ್ಕೋರ್ ಗಳಿಸಲಿದೆ ಎಂದು ಒಂದು ಹಂತದಲ್ಲಿ ಅಂದಾಜಿಸಲಾಗಿತ್ತು.
ಆದರೆ, ವೇಗಿ ಮುಕೇಶ್ ಕುಮಾರ್ ಅವರು ತಮ್ಮ ಕರಾರುವಾಕ್ ಬೌಲಿಂಗ್ ಮೂಲಕ ಅಥನ್ಜೆ (22), ಬ್ರಾಂಡನ್ ಕಿಂಗ್ (17) ಅವರ ವಿಕೆಟ್ ಪಡೆಯುವ ಮೂಲಕ ಕೆರಿಬಿಯನ್ನರ ರನ್ ಬೇಟೆಗೆ ಕಡಿವಾಣ ಹಾಕಿದರು. ಶಾಹಿ ಹೋಪ್ ಮತ್ತು ಹೆಟ್ಮಾಯರ್ ಕೆಲಕಾಲ ಕ್ರೀಸ್ನಲ್ಲಿ ಉತ್ತಮ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. ಜಡೇಜಾ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಅವರೂ ಹೊರ ನಡೆದರು. ಇಲ್ಲಿಂದ ವಿಂಡೀಸ್ ಒಂದರ ಹಿಂದೊಂದಂತೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಜಡೇಜಾ, ಕುಲ್ದೀಪ್ ಬಿಗು ಬೌಲಿಂಗ್ ದಾಳಿಗೆ ಸಿಲುಕಿದ ವಿಂಡೀಸ್ 26 ರನ್ಗಳಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡು ದಿಢೀರ್ ಅಲ್ಪಮೊತ್ತಕ್ಕೆ ಕುಸಿಯಿತು. ನಾಯಕ ಶೈ ಹೋಪ್ (45 ಎಸೆತಗಳಲ್ಲಿ 43; 4 ಬೌಂಡರಿ, 1 ಸಿಕ್ಸರ್) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಕನಿಷ್ಠ 25 ಓವರ್ಗಳನ್ನೂ ಪೂರೈಸದೇ ವಿಂಡೀಸ್ 23 ಓವರ್‌ಗಳಲ್ಲಿ 114 ರನ್ಗಳಿಸಲಷ್ಟೇ ಶಕ್ತವಾಯಿತು.
7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೋಹಿತ್: ಈ ಅಲ್ಪಮೊತ್ತದ ಗುರಿ ಪಡೆದ ಭಾರತ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿತ್ತು. ರೋಹಿತ್ ಬದಲಿಗೆ ಇಶಾನ್ ಕಿಶನ್ ಮತ್ತು ಶುಭ್ಮನ್ಗಿಲ್ ಆರಂಭಿಕರಾಗಿ ಕಣಕ್ಕಿಳಿದರು. ಶುಭಮನ್ ಗಿಲ್ (7) ಜೈಡೆನ್ ಎಸೆತದಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಮತ್ತೊಮ್ಮೆ ಉತ್ತಮ ಸ್ಕೋರ್ ಗಳಿಸುವಲ್ಲಿ ವಿಫಲರಾದರು. ಸೂರ್ಯಕುಮಾರ್ ಯಾದವ್ ಸಹ ಏಕದಿನದಲ್ಲಿ ತಮ್ಮ ಕಳಪೆ ಪ್ರದರ್ಶನ ಮುಂದುವರೆಸಿದ್ದು, 19 ರನ್ ಗಳಿಸಿ ಮೋತಿಗೆ ವಿಕೆಟ್ ನೀಡಿ ಪೆವಿಲಿಯನ್ ಸೇರಿದರು. ಉಳಿದಂತೆ ಹಾರ್ದಿಕ್ ಪಾಂಡ್ಯ (5), ಶಾರ್ದೂಲ್ ಠಾಕೂರ್ (1), ರವೀಂದ್ರ ಜಡೇಜಾ (16 ಅಜೇಯ),ನಾಯಕ ರೋಹಿತ್ ಶರ್ಮಾ (12 ಅಜೇಯ) ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶನ್ 52 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಇದರೊಂದಿಗೆ ವೆಸ್ಟ್ ಇಂಡೀಸ್ ವಿರುದ್ದ ಏಕದಿನ ಪಂದ್ಯಗಳಲ್ಲಿ ಭಾರತ ಸತತ 9ನೇ ಗೆಲುವು ಗಳಿಸಿತು.