ಹೈದರಾಬಾದ್:ಎಡಗೈ ಆಟಗಾರ ಮೈಕೆಲ್ ಬ್ರೇಸ್ವೆಲ್(140 ರನ್, 78 ಎಸೆತ) ಅಬ್ಬರದ ಹೋರಾಟದ ನಡುವೆಯೂ ಕೂಡ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 12 ರನ್ಗಳ ಜಯದ ನಗೆ ಬೀರಿದೆ. 350 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಕಿವೀಸ್ಗೆ ಬ್ರೇಸ್ವೆಲ್ ಶತಕ ಸಿಡಿಸಿ ಗೆಲುವಿನ ಭರವಸೆ ಮೂಡಿಸಿದ್ದರೂ ಸಹ, ಅಂತಿಮವಾಗಿ ಔಟಾಗುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಈ ಗೆಲುವಿನೊಂದಿಗೆ ರೋಹಿತ್ ಶರ್ಮಾ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
350 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಆರಂಬ ಉತ್ತಮವಾಗಿರಲಿಲ್ಲ. 28 ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಡೆವೊನ್ ಕಾನ್ವೆ 10 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಮತ್ತೋರ್ವ ಆರಂಭಿಕ ಆಟಗಾರ ಫಿನ್ ಅಲೆನ್ ಕೆಲ ಅದ್ಭುತ ಹೊಡೆತಗಳನ್ನು ಬಾರಿಸಿ ಭರವಸೆ ಮೂಡಿಸಿದರೂ ಸಹ 40 ರನ್ ಗಳಿಸಿ ಔಟಾದರು. ಅಲೆನ್ ವಿಕೆಟ್ ಪತನದ ಬಳಿಕ ಕಿವೀಸ್ ಇನ್ನಿಂಗ್ಸ್ ನಿಧಾನ ಗತಿಯತ್ತ ಸಾಗಿತು. ಅಲ್ಲದೆ, ನಿರಂತರವಾಗಿ ವಿಕೆಟ್ ಕಬಳಿಸಿದ ಭಾರತದ ಬೌಲರ್ಗಳು ನ್ಯೂಜಿಲ್ಯಾಂಡ್ ತಂಡದ ಮೇಲೆ ಒತ್ತಡ ಹೇರಿದ್ದರು. 131 ರನ್ಗೆ 6 ವಿಕೆಟ್ ಕಳೆದುಕೊಂಡಾಗ ಭಾರತ ಸುಲಭ ಜಯ ಸಾಧಿಸುವತ್ತ ಸಾಗಿತ್ತು. ಅಷ್ಟರಲ್ಲಾಗಲೇ ನಾಯಕ ಟಾಮ್ ಲ್ಯಾಥಮ್(24) ಸೇರಿದಂತೆ, ಹೆನ್ರಿ ನಿಕೋಲ್ಸ್(18), ಡೇರಿಲ್ ಮಿಚೆಲ್(9) ಹಾಗೂ ಯುವ ಆಟಗಾರ ಗ್ಲೆನ್ ಫಿಲಿಪ್ಸ್ 11 ರನ್ಗೆ ವಿಕೆಟ್ ಒಪ್ಪಿಸಿದ್ದರು.
ಆದರೆ, ಬಳಿಕ ಒಂದಾದ ಮೈಕೆಲ್ ಬ್ರೇಸ್ವೆಲ್ ಅಬ್ಬರದ ಶತಕ (140) ಹಾಗೂ ಉಪಯುಕ್ತ ಬ್ಯಾಟಿಂಗ್ ಕಾಣಿಕೆ ನೀಡಿದ ಮಿಚೆಲ್ ಸ್ಯಾಂಟ್ನರ್(57) ಅರ್ಧಶತಕ ಬಾರಿಸಿ ತಂಡಕ್ಕೆ ಗೆಲುವಿನ ಆಸೆ ಚಿಗುರುವಂತೆ ಮಾಡಿದರು. ಭಾರತದ ಬೌಲರ್ಗಳನ್ನು ಲೀಲಾಜಾಲವಾಗಿ ದಂಡಿಸಿದ ಈ ಜೋಡಿ ಏಳನೇ ವಿಕೆಟ್ಗೆ 162 ರನ್ ಪೇರಿಸಿತು. ಸ್ಯಾಂಟ್ನರ್ 45 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 57 ರನ್ ಬಾರಿಸಿ ತಂಡದ ಮೊತ್ತ 293 ರನ್ ಆಗಿದ್ದಾಗ ಸಿರಾಜ್ ಬೌಲಿಂಗ್ನಲ್ಲಿ ಔಟಾದರು.