ಚಿತ್ತಗಾಂಗ್: ಇಲ್ಲಿನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ಧ ಮುಕ್ತಾಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 188 ರನ್ಗಳ ಜಯ ದಾಖಲಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಗಳಿಸಿತು.
ಭಾರತ ನೀಡಿದ 513 ರನ್ಗಳ ಬೃಹತ್ ಗೆಲುವಿನ ಗುರಿ ಬೆನ್ನಟ್ಟಿದ ಬಾಂಗ್ಲಾ ನಾಲ್ಕನೇ ದಿನದಾಟಕ್ಕೆ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತ್ತು. ಅಂತಿಮ ದಿನದಲ್ಲಿ 50 ನಿಮಿಷಗಳಲ್ಲೇ ಉಳಿದ ನಾಲ್ಕು ವಿಕೆಟ್ ಕಬಳಿಸಿದ ಟೀಮ್ ಇಂಡಿಯಾ ಭರ್ಜರಿ ಗೆಲುವಿನ ನಗೆ ಬೀರಿತು. 40 ರನ್ ಗಳಿಸಿ ಬ್ಯಾಟಿಂಗ್ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ನಾಯಕ ಶಕಿಲ್ ಅಲ್ ಹಸನ್ 84 ರನ್ ಬಾರಿಸಿ ಕುಲದೀಪ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಮೆಹದಿ ಹಸನ್ ಮಿರಾಜ್ 13, ತೈಜುಲ್ ಇಸ್ಲಾಮ್ 4 ಹಾಗೂ ಎಬಾಡೋಟ್ ಹೊಸೈನ್ ಶೂನ್ಯಕ್ಕೆ ಔಟಾಗುವ ಮೂಲಕ ಬಾಂಗ್ಲಾ ಸೋಲೊಪ್ಪಿಕೊಂಡಿತು.
ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 404 ರನ್‌ಗಳನ್ನು ಪೇರಿಸಿತ್ತು. ಬಳಿಕ ಬಾಂಗ್ಲಾದೇಶ ಕೇವಲ 150 ರನ್ಗಳಿಗೆ ಸರ್ವಪತನ ಕಂಡಿತ್ತು. ತದನಂತರ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲಿ 2 ವಿಕೆಟ್ ನಷ್ಟಕ್ಕೆ 258 ರನ್ ಪೇರಿಸಿ ಶುಕ್ರವಾರ ಡಿಕ್ಲೇರ್ ಮಾಡಿಕೊಂಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ 254 ರನ್ಗಳ ಹಿನ್ನಡೆಯಿಂದಾಗಿ ಬಾಂಗ್ಲಾ ಗೆಲುವಿಗೆ ಒಟ್ಟಾರೆ 513 ರನ್ಗಳ ಬೃಹತ್ ಟಾರ್ಗೆಟ್ ನೀಡಲಾಗಿತ್ತು.