ಮೆಕಾಯ್: ನಾಲ್ಕು ವರ್ಷಗಳಿಂದ ಏಕದಿನ ಕ್ರಿಕೆಟ್ನಲ್ಲಿ ಸೋಲಿಲ್ಲದೇ ಸತತ 26 ಪಂದ್ಯಗಳಲ್ಲಿ ಗೆಲುವು ಪಡೆದು ಸಾಗುತ್ತಿದ್ದ ಆಸ್ಟ್ರೇಲಿಯಾ ಮಹಿಳಾ ತಂಡವನ್ನು ಮಿಥಾಲಿ ರಾಜ್ ಪಡೆ ಇಂದು ಮಣಿಸುವ ಮೂಲಕ ಕಾಂಗರೂಗಳ ಗೆಲುವಿನ ದಂಡಯಾತ್ರೆಗೆ ಬ್ರೇಕ್ ಹಾಕಿದೆ.
ಭಾನುವಾರ ನಡೆದ ಮೂರು ಏಕದಿನ ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 264 ರನ್ಗಳಿಸಿತ್ತು.
ಅಲಿಸ್ಸಾ ಹೀಲಿ 35, ಬೆತ್ ಮೂನಿ 52, ಆ್ಯಶ್ ಗಾರ್ಡ್ನರ್ 67 ಮತ್ತು ತಹಿಲಾ ಮೆಕ್ಗ್ರಾತ್ 47 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಗಿದ್ದರು. ಭಾರತದ ಪರ ಜೂಲನ್ ಗೋಸ್ವಾಮಿ 37ಕ್ಕೆ 3, ಪೂಜಾ ವಸ್ತ್ರಾಕರ್ 46ಕ್ಕೆ 3 ಮತ್ತು ಸ್ನೇಹ್ ರಾಣಾ 56ಕ್ಕೆ 1 ವಿಕೆಟ್ ಪಡೆದು ಮಿಂಚಿದರು.
267 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡ 49.3 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆರಂಭಿಕರಾದ ಸ್ಮೃತಿ 22 , ಶಫಾಲಿ ವರ್ಮಾ 91 ಎಸೆತಗಳಲ್ಲಿ 56, ಯಸ್ತಿಕಾ ಭಾಟಿಯ 64, ದೀಪ್ತಿ ಶರ್ಮಾ 31, ಸ್ನೇಹ್ ರಾಣಾ 30 ರನ್ಗಳಿಸಿ ಗೆಲುವಿನ ರೂವಾರಿಯಾದರು.
ಸತತ 26 ಪಂದ್ಯಗಳ ಗೆಲುವಿನ ಓಟಕ್ಕೆ ಕಡಿವಾಣ
2018ರಲ್ಲಿ ಭಾರತದ ವಿರುದ್ಧವೇ ಗೆಲುವಿನ ಅಭಿಯಾನ ಆರಂಭಿಸಿದ್ದ ಆಸ್ಟ್ರೇಲಿಯಾ 4 ವರ್ಷಗಳಲ್ಲಿ 26 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಇಂದು ಭಾರತ ತಂಡವೇ ಆ ಗೆಲುವಿನ ಓಟವನ್ನು ತಡೆಯಿತು. 2ನೇ ಏಕದಿನ ಪಂದ್ಯದಲ್ಲೂ ಭಾರತ ತಂಡಕ್ಕೆ ಗೆಲುವು ಸಾಧಿಸುವ ಅವಕಾಶವಿತ್ತಾದರೂ ಗೋಸ್ವಾಮಿ ಕೊನೆಯ ಓವರ್ನಲ್ಲಿ ಎಸೆದ 2 ನೋಬಾಲ್ ಗೆಲುವನ್ನು ತಪ್ಪಿಸಿತಲ್ಲದೆ, ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಏಕದಿನ ಸರಣಿ ಗೆಲ್ಲುವ ಅದ್ಭುತ ಅವಕಾಶವನ್ನು ಕೈಚೆಲ್ಲುವಂತೆ ಮಾಡಿತ್ತು.
ಆಸೀಸ್ ಗೆಲುವಿನ ಓಟಕ್ಕೆ ಭಾರತೀಯರಿಂದ ಸವಾಲು
ಭಾರತ ತಂಡ ಆಸ್ಟ್ರೇಲಿಯನ್ನರ ಅಜೇಯ ಓಟಕ್ಕೆ ಬ್ರೇಕ್ ನೀಡಿರುವುದು ಇದೇ ಮೊದಲೇನಲ್ಲ. 2001ರಲ್ಲಿ ಗಂಗೂಲಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾದ 16 ಟೆಸ್ಟ್ ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ನೀಡಿದ್ದರು. 2008ರಲ್ಲಿ ಅನಿಲ್ ಕುಂಬ್ಳೆ ನೇತೃತ್ವದ ತಂಡ ತವರಿನಲ್ಲಿ ಆಸ್ಟ್ರೇಲಿಯಾದ 16 ಟೆಸ್ಟ್ ಪಂದ್ಯಗಳ ಗೆಲುವಿನ ಓಟವನ್ನು ತಡೆದಿತ್ತು. 2021ರಲ್ಲಿ ರಹಾನೆ ನೇತೃತ್ವದ ಟೀಮ್ ಇಂಡಿಯಾ ಗಬ್ಬಾದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ 33 ವರ್ಷಗಳ ಗೆಲುವಿನ ಓಟವನ್ನು ತಡೆದು 2-1ರಲ್ಲಿ ಐತಿಹಾಸಿಕ ಸರಣಿ ಗೆದ್ದು ಸಂಭ್ರಮಿಸಿತ್ತು.
ಇದನ್ನೂ ಓದಿ: ಸಿಎಸ್ಕೆ ಪ್ಲೇ ಆಫ್ ತಲುಪಿದ ಮೇಲೆ ಧೋನಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ್ಬೇಕು : ಗಂಭೀರ್ ಸಲಹೆ