ನವದೆಹಲಿ:ಶುಭ್‌ಮನ್ ಗಿಲ್, ಭಾರತ ಕ್ರಿಕೆಟ್ ತಂಡದ ಸದ್ಯದ ಸ್ಟಾರ್ ಬ್ಯಾಟರ್. ಉದಯೋನ್ಮುಖ ಆಟಗಾರ ಕಳೆದ ಐಪಿಎಲ್ ಸೀಸನ್ನಲ್ಲಿ ರನ್ ಮಳೆಯೇ ಹರಿಸಿದ್ದಾರೆ. ಸಹಜವಾಗಿಯೇ ಅಭಿಮಾನಿಗಳು ಹೆಚ್ಚಿದ್ದಾರೆ. ಹೋದ ಬಂದಲ್ಲೆಲ್ಲಾ ಗಿಲ್ರನ್ನು ಜನರು ಮುತ್ತಿಕೊಳ್ಳುತ್ತಿದ್ದಾರೆ. ಇದು ಆಟಗಾರನಿಗೆ ಹೆಮ್ಮೆಯಾದರೂ ಕೆಲವೊಮ್ಮೆ ಭಾರೀ ಕಿರಿಕಿರಿ ಉಂಟು ಮಾಡುತ್ತದೆ. ಅಂಥದ್ದೇ ಒಂದು ಘಟನೆ ಕೆಲ ದಿನಗಳ ಹಿಂದೆ ನಡೆದಿದೆ. ಅಭಿಮಾನಿಗಳು ಆಟಗಾರನ ಬಳಿ ಒತ್ತಾಯಪೂರ್ವಕವಾಗಿ ಸೆಲ್ಫಿ ಪಡೆದಿದ್ದಾರೆ.
ಗಿಲ್ ವಿಮಾನ ನಿಲ್ದಾಣದಿಂದ ಹೊರಹೋಗುತ್ತಿದ್ದಾಗ, ಅಲ್ಲಿದ್ದ ಅಭಿಮಾನಿಗಳು ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಕೆಲವರ ಜೊತೆ ಪೋಸ್ ನೀಡಿದ ಆಟಗಾರ ಬಳಿಕ, ಅಲ್ಲಿಂದ ಹೊರಡಲು ಯತ್ನಿಸಿದ್ದಾರೆ. ಆದರೆ, ಬಿಡದ ಅಭಿಮಾನಿಗಳು ಸರತಿಯಲ್ಲಿ ಬಂದು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಹೊರಡುವ ಧಾವಂತದಲ್ಲಿದ್ದ ಆಟಗಾರನಿಗೆ ಇದು ಕಿರಿಕಿರಿ ಉಂಟು ಮಾಡಿದೆ. ಗಿಲ್ ಅವರನ್ನು ಹೊರಡಲು ಬಿಡದ ಫ್ಯಾನ್ಸ್ ಚಿತ್ರ ತೆಗೆದುಕೊಳ್ಳುತ್ತಿದ್ದರು.
ಈ ವೇಳೆ, ಅಲ್ಲಿಂದ ತೆರಳಲು ಮುಂದಾದ ಗಿಲ್ರನ್ನು ಬಿಡದ ಜನರು ಸೆಲ್ಫಿಗಾಗಿ ಒತ್ತಾಯ ಮಾಡಿದರು. ಆದರೂ ಆಟಗಾರ ಅಲ್ಲಿಂದ ಮುಂದೆ ಸಾಗಿದರು. ಇದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಆಟಗಾರ ಕಸಿವಿಸಿಯಿಂದಲೇ ಅಲ್ಲಿಂದ ಹೋಗಿದ್ದು, ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿದೆ.
ಜಾಲತಾಣಗಳಲ್ಲಿ ಸಕ್ರಿಯ:ಶುಭ್‌ಮನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ. ತನ್ನ ಅಭಿಮಾನಿಗಳಿಗಾಗಿ ಅಂತರ್ಜಾಲದಲ್ಲಿ ಯಾವುದಾದರೂ ಚಿತ್ರವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಟೀಂ ಇಂಡಿಯಾದ ಮುಂದಿನ ನಾಯಕ ಎಂದು ಕೂಡ ಗಿಲ್ ಬಿಂಬಿತರಾಗಿದ್ದಾರೆ. ಆದರೆ, ವಿಮಾನ ನಿಲ್ದಾಣದಲ್ಲಿ ಈಚೆಗೆ ನಡೆದ ವಿದ್ಯಮಾನದಿಂದಾಗಿ ಅಭಿಮಾನಿಗಳೊಂದಿಗೆ ಸ್ವಲ್ಪ ಅಸಮಾಧಾನಗೊಂಡಿದ್ದಾರೆ.