ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ಹರಿಣಗಳ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬೆನ್ನು ಸೆಳೆತದಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಅವರು ಸಂಪೂರ್ಣ ಫಿಟ್‌ನೆಸ್‌ಗೆ ಮರಳಿದ್ದಾರೆ. ಬುಧವಾರದಿಂದ ನ್ಯೂಲ್ಯಾಂಡ್ಸ್ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ಭಾರತ ಗೆಲುವು ಸಾಧಿಸಿ ಸರಣಿ ಸಮಬಲ ಮಾಡಿಕೊಳ್ಳಲು ತಂತ್ರ ಹೆಣೆದಿದ್ದು, ಸ್ಪಿನ್ನರ್ ಸ್ಥಾನದ ಬದಲಾವಣೆ ನಿರೀಕ್ಷೆಯಲ್ಲಿದೆ.
ಬ್ಯಾಟಿಂಗ್ ವೈಫಲ್ಯದಿಂದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 32 ರನ್ಗಳ ಹಿನ್ನಡೆಯಿಂದ ಸೋಲೊಪ್ಪಿಕೊಂಡಿತು. ಈಗ ರವೀಂದ್ರ ಜಡೇಜಾ ಫಿಟ್‌ನೆಸ್‌ಗೆ ಮರಳಿರುವುದು ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಲಿದೆ ಎಂಬ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಅದರ ಜತೆಯಲ್ಲಿ ಬೌಲಿಂಗ್‌ನಲ್ಲಿ ಜಡೇಜಾ ಕಮಾಲ್ ನೋಡಲು ಕುತೂಹಲ ಇದೆ.
ಪಂದ್ಯದ ಮುನ್ನಾದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಶರ್ಮಾ ತಂಡದ ಆಟಗಾರರ ಲಭ್ಯತೆ ಬಗ್ಗೆ ಮಾತನಾಡಿದ್ದಾರೆ. "ಈ ಪಂದ್ಯದಿಂದ ನಾವು ಏನು ಬಯಸುತ್ತೇವೆ ಮತ್ತು ಬೌಲರ್‌ಗಳಿಂದ ನಾವು ಏನು ಬಯಸುತ್ತೇವೆ ಎಂಬುದರ ಕುರಿತು ನಾವು ಮ್ಯಾನೇಜ್‌ಮೆಂಟ್ ಮತ್ತು ಕೋಚಿಂಗ್ ಸಿಬ್ಬಂದಿಯೊಂದಿಗೆ ಸಂಕ್ಷಿಪ್ತ ಮಾತುಕತೆ ನಡೆಸಿದರೂ, ಆಡುವ ಬಳಗ ಅಂತಿಮಗೊಳಿಸಿಲ್ಲ. ಎಲ್ಲರೂ ಆಯ್ಕೆಗೆ ಲಭ್ಯವಿದ್ದಾರೆ. ಯಾವುದೇ ಗಾಯದ ಆತಂಕವಿಲ್ಲ. ನಾವು ಸಂಜೆ ಕುಳಿತು ಆಯ್ಕೆಗಳ ಕುರಿತು ಚರ್ಚೆ ಮಾಡಲಿದ್ದೇವೆ" ಎಂದು ತಿಳಿಸಿದರು.
ನಮ್ಮ ಬೌಲಿಂಗ್‌ನಲ್ಲಿ ನಮಗೆ ಸ್ವಲ್ಪ ಅನುಭವದ ಕೊರತೆ ಇದೆ ಎಂದು ನನಗೆ ಇನ್ನೂ ಅನಿಸುತ್ತದೆ. ಕೆಲವೊಮ್ಮೆ ಅನುಭವದ ಕೊರತೆ ಹೊಂದಿದ್ದಾಗ ಅವರ ಮೇಲೆ ಸ್ವಲ್ಪ ನಂಬಿಕೆಯನ್ನು ತೋರಿಸಬೇಕು, ಅವರಲ್ಲಿ ವಿಶ್ವಾಸ ಇಡಬೇಕು ಎಂದು ರೋಹಿತ್ ಹೇಳಿದ್ದಾರೆ.
ಪಿಚ್ ಅದೇ ರೀತಿ ಇದೆ: ಪಿಚ್ ಸೆಂಚುರಿಯನ್ ರೀತಿಯಲ್ಲೇ ಕಾಣಿಸುತ್ತಿದೆ. ಅಲ್ಲಿಗೂ ಇಲ್ಲಿಗೂ ಹವಾಮಾನದಲ್ಲಿ ಸ್ವಲ್ಪ ಬದಲಾವಣೆ ಇದೆ. ಇಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದೆ. ಇದಕ್ಕೆ ಆಟಗಾರರು ಒಗ್ಗಿಕೊಳ್ಳಬೇಕಿದೆ. ಪಿಚ್ ದಕ್ಷಿಣ ಆಫ್ರಿಕಾದ ಸ್ವಿಂಗ್ ಮತ್ತು ಬೌನ್ಸ್ನ ಮಿಶ್ರಣವನ್ನು ತೋರುತ್ತದೆ. ಪರಿಸ್ಥಿತಿಗಳು ಹೀಗಿರುವಾಗ ಏನು ಬೇಕು ಎಂದು ನಮಗೆ ನಿಖರವಾಗಿ ತಿಳಿದಿದೆ. ಪಿಚ್‌ಗಳ ಆಧಾರದ ಮೇಲೆ, ಪರಿಸ್ಥಿತಿಗೆ ತಕ್ಕಂತೆ ಪ್ರತಿಕ್ರಿಯಿಸಬೇಕು" ಎಂದು ರೋಹಿತ್ ಹೇಳಿದ್ದಾರೆ.
ಬದಲಾವಣೆ:ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಕಾಣಲು ಸಾಧ್ಯವಿಲ್ಲ. ಆದರೆ ಬೌಲಿಂಗ್‌ನಲ್ಲಿ ಎರಡು ಬದಲಾವಣೆ ನಿರೀಕ್ಷಿಸಬಹುದು. ಮೊದಲ ಪಂದ್ಯದಲ್ಲಿ ಆರ್. ಅಶ್ವಿನ್ 19 ಓವರ್ ಮಾಡಿ 1 ವಿಕೆಟ್ ಪಡೆದು 41 ರನ್ ಬಿಟ್ಟುಕೊಟ್ಟರು. ಬ್ಯಾಟಿಂಗ್ನಲ್ಲೂ ಅಶ್ವಿನ್ ಅವರಿಂದ ದೊಡ್ಡ ಮೊತ್ತದ ಸಹಾಯ ಕಂಡು ಬಂದಿಲ್ಲ ಹೀಗಾಗಿ ಜಡೇಜಾಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.
ವೇಗದ ಬೌಲಿಂಗ್ ವಿಭಾಗದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಪ್ರಸಿದ್ಧ್ ಕೃಷ್ಣ ಅವರನ್ನು ಕೈ ಬಿಟ್ಟು ಮೊಹಮ್ಮದ್ ಶಮಿ ಅವರ ಬದಲಾಗಿ ಆಯ್ಕೆ ಆಗಿರುವ ಅನ್‌ಕ್ಯಾಪ್ಡ್ ಸೀಮರ್ ಅವೇಶ್ ಖಾನ್ ಅವರನ್ನು ತಂಡಕ್ಕೆ ಆಯ್ಕೆ ಆಗಬಹುದು. ಆದರೆ ಪತ್ರಿಕಾಗೋಷ್ಠಿಯಲ್ಲಿ ರೋಹಿತ್, ಪ್ರಸಿದ್ಧ್ ಕೃಷ್ಣ ತನ್ನ ಮೊದಲ ಪಂದ್ಯವನ್ನು ಆಡುತ್ತಿರುವುದರಿಂದ ಅವರಲ್ಲಿ ಭಯ ಇತ್ತು, ಅದನ್ನು ನಾವು ಅರ್ಧ ಮಾಡಿಕೊಳ್ಳಬೇಕು. ಪ್ರಸಿದ್ಧ್ ಈ ಹಂತದಲ್ಲಿ ಮತ್ತು ವಿಶೇಷವಾಗಿ ಈ ಸ್ವರೂಪದಲ್ಲಿ ಯಶಸ್ವಿಯಾಗಲು ಅವರು ಉತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದಿದ್ದಾರೆ. ಹೀಗಾಗಿ ಪ್ರಸಿದ್ಧ್ಗೆ ಇನ್ನೊಂದು ಅವಕಾಶ ಸಿಗುವ ಸಾಧ್ಯತೆಯೂ ಇದೆ.
ಇದನ್ನೂ ಓದಿ:ಪ್ರಸಿದ್ಧ್ ಕೃಷ್ಣಗೆ ಟೆಸ್ಟ್ ಕ್ರಿಕೆಟ್ನಲ್ಲಿ ಯಶಸ್ಸು ಸಾಧಿಸುವ ಸಾಮರ್ಥ್ಯವಿದೆ : ರೋಹಿತ್ ಶರ್ಮಾ