ವಿಶಾಖಪಟ್ಟಣಂ:ವಿಶ್ವಕಪ್ಗೆ ತಯಾರಿ ನಡೆಸುತ್ತಿರುವ ಭಾರತ-ಆಸ್ಟ್ರೇಲಿಯಾ ತಂಡಗಳ ನಡುವಿನ ಏಕದಿನ ಸರಣಿಯ 2ನೇ ಪಂದ್ಯ ಇಂದು ಮಧ್ಯಾಹ್ನ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಮೊದಲ ಪಂದ್ಯ ಸೋತಿರುವ ಆಸೀಸ್ ಬಳಗ ಪುಟಿದೇಳುವ ಉತ್ಸಾಹದಲ್ಲಿದ್ದರೆ, ತವರಿನಲ್ಲಿ ಸತತ 8ನೇ ಸರಣಿ ಗೆಲುವು ಸಾಧಿಸುವ ಗುರಿ ಭಾರತಕ್ಕಿದೆ. ಇದೇ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯೂ ಎದುರಾಗಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಉಭಯ ತಂಡಗಳು ಬ್ಯಾಟಿಂಗ್ ವೈಫಲ್ಯ ಅನುಭವಿಸಿದವು. ಆಸೀಸ್ ಪರವಾಗಿ ಮಿಚೆಲ್ ಮಾರ್ಷ್ ಹೊರತಾಗಿ ಬೇರಾವ ಬ್ಯಾಟರ್ ರನ್ ಗಳಿಸಿಲಿಲ್ಲ. ಕೆ.ಎಲ್.ರಾಹುಲ್, ರವೀಂದ್ರ ಜಡೇಜಾ ಬ್ಯಾಟಿಂಗ್ ಬಲದಿಂದ ಭಾರತ ಗೆಲುವು ಸಾಧಿಸಿತು. ಪಿಚ್ ಕೂಡ ಪರಿಣಾಮಕಾರಿಯಾಗಿ ವರ್ತಿಸಿ ಅಚ್ಚರಿ ಮೂಡಿಸಿತು.
ನಾಯಕ ರೋಹಿತ್ ವಾಪಸ್:ವೈಯಕ್ತಿಕ ಕಾರಣಗಳಿಗಾಗಿ ಮೊದಲ ಏಕದಿನ ಪಂದ್ಯದಿಂದ ತಪ್ಪಿಸಿಕೊಂಡಿದ್ದ ನಾಯಕ ರೋಹಿತ್ ಶರ್ಮಾ ವಾಪಸ್ ಆಗಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಆಗಮನದಿಂದಾಗಿ ಆರಂಭಿಕ ಇಶಾನ್ ಕಿಶನ್ ಅಥವಾ ಮಧ್ಯಮ ಕ್ರಮಾಂಕದಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿರುವ ಸೂರ್ಯಕುಮಾರ್ ಯಾದವ್ ಸ್ಥಾನ ತೆರವು ಮಾಡಬೇಕಿದೆ. ಸತತವಾಗಿ ಕ್ರಿಕೆಟ್ ಆಡುತ್ತಿರುವ ಮೊಹಮದ್ ಶಮಿಗೆ ಪಂದ್ಯದಿಂದ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.
ವಿಶಾಖಪಟ್ಟಣದ ಡಾ.ವೈ.ಎಸ್.ರಾಜಶೇಖರ್ರೆಡ್ಡಿ ಕ್ರೀಡಾಂಗಣ ಸ್ಪಿನ್ನರ್ಗಳಿಗೆ ಹೆಚ್ಚು ನೆರವು ನೀಡುವ ಕಾರಣ ಜಡೇಜಾ, ಅಕ್ಷರ್ ಜೊತೆಗೆ ಮೂರನೇ ಸ್ಪಿನ್ನರ್ ಕಣಕ್ಕಿಳಿಸುವ ಸಾಧ್ಯತೆ ಇದೆ. ಹಾಗಾದಲ್ಲಿ ವಾಷಿಂಗ್ಟನ್ ಸುಂದರ್ ಸ್ಥಾನ ಪಡೆಯಬಹುದು. ಈ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಅದ್ಭುತ ಆಟ ಪ್ರದರ್ಶಿಸಿದ್ದು, ಇಂದು ಕಮಾಲ್ ಮಾಡಲಿದ್ದಾರಾ ಎಂಬುದು ಅಭಿಮಾನಿಗಳ ನಿರೀಕ್ಷೆ.
ತಿರುಗೇಟು ನೀಡುತ್ತಾ ಆಸೀಸ್?:ಆಸ್ಟ್ರೇಲಿಯಾ ತಂಡ ಟೆಸ್ಟ್ ಸರಣಿ ಸೋತಿದ್ದು, ಮೊದಲ ಏಕದಿನವನ್ನೂ ಕಳೆದುಕೊಂಡಿದೆ. ಈ ಪಂದ್ಯದಲ್ಲಿ ಗೆದ್ದು ಸರಣಿ ಜೀವಂತವಾಗಿಟ್ಟುಕೊಳ್ಳಲು ಹೋರಾಡಲಿದೆ. ಮಿಚೆಲ್ ಮಾರ್ಷ್ ಮೊದಲ ಪಂದ್ಯದಲ್ಲಿ ತಂಡಕ್ಕೆ ನೆರವಾಗಿದ್ದರು. ಅನಾರೋಗ್ಯದ ಕಾರಣ ಅಲೆಕ್ಸ್ ಕ್ಯಾರಿ ಆಟವಾಡಿರಲಿಲ್ಲ. ಈ ಪಂದ್ಯದಲ್ಲಿ ವಾಪಸ್ ಆಗಲಿದ್ದಾರೆ. ಗಾಯಗೊಂಡಿದ್ದ ಡೇವಿಡ್ ವಾರ್ನರ್ ಕೂಡ ಮರಳುವ ಸಾಧ್ಯತೆಯಿದೆ.