ಹೈದರಾಬಾದ್:ವಿಶ್ವಕಪ್ಗೂ ಮುನ್ನ ನಡೆಯಲಿರುವ ಏಷ್ಯಾ ರಾಷ್ಟ್ರಗಳ ನಡುವಿನ ಪ್ರತಿಷ್ಠಿತ ಕ್ರಿಕೆಟ್ ಟ್ರೋಪಿ ಏಷ್ಯಾಕಪ್ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ಗಾಯದಿಂದ ಚೇತರಿಸಿಕೊಂಡ ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ ಕೃಷ್ಣ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೇ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಟಿ20 ತಂಡಕ್ಕೆ ಪದಾರ್ಪಣೆ ಮಾಡಿ ಗಮನಾರ್ಹ ಪ್ರದರ್ಶನ ನೀಡಿದ 20 ವರ್ಷ ತಿಲಕ್ ವರ್ಮಾ ಕೂಡಾ ಸ್ಥಾನ ಪಡೆದುಕೊಂಡಿದ್ದಾರೆ.
ವಿಶ್ವದ ನಂಬರ್ ಒನ್ ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಏಕದಿನ ಸ್ವರೂಪದಲ್ಲಿ ಅಷ್ಟು ಯಶಸ್ಸು ಕಂಡಿಲ್ಲವಾದರೂ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. 26 ಏಕದಿನ ಪಂದ್ಯಗಳನ್ನು ಆಡಿರುವ ಅವರು 24 ಇನ್ನಿಂಗ್ಸ್‌ಗಳಲ್ಲಿ ಅವರು ಎರಡು ಅರ್ಧಶತಕಗಳೊಂದಿಗೆ 24.33 ಸರಾಸರಿಯಲ್ಲಿ ಕೇವಲ 511 ರನ್‌ಗಳನ್ನು ಗಳಿಸಿದ್ದಾರೆ.
ವಿಕೆಟ್ ಕೀಪರ್ ಸ್ಥಾನಕ್ಕೆ ಮೂವರು ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಗುಣಮುಖ ರಾಗಿ ತಂಡಕ್ಕೆ ಸೇರಿಕೊಂಡ ಕೆ. ಎಲ್. ರಾಹುಲ್ ಮತ್ತು ಇಶಾನ್ ಕಿಶನ್ ಪ್ರಕಟವಾದ 17 ಜನರ ತಂಡದಲ್ಲಿ ಇದ್ದರೆ, ಸಂಜು ಸ್ಯಾಮ್ಸನ್ ಅವರನ್ನು ಟ್ರಾವೆಲಿಂಗ್ ಸ್ಟ್ಯಾಂಡ್-ಬೈ ಆಟಗಾರ ಎಂದು 18ನೇ ಪ್ಲೇಯರ್ ಆಗಿ ಸೆಲೆಕ್ಟ್ ಆಗಿದ್ದಾರೆ. ಒಂದು ವೇಳೆ ಇಬ್ಬರು ಕೀಪರ್ಗಳು ಅಲಭ್ಯರಾದಲ್ಲಿಇವರಿಗೆ ಸ್ಥಾನ ಸಿಗಲಿದೆ.
ಮರಳಿದ ಗಾಯಾಳುಗಳು:ಐರ್ಲೆಂಡ್ ಪ್ರವಾಸದ ಮೂಲಕ ಜಸ್ಪ್ರೀತ್ ಬುಮ್ರಾ ಟಿ20ಗೆ ಮರಳಿದರು. ಅವರು ಇದೇ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಏಷ್ಯಾಕಪ್ನಲ್ಲೂ ಆಡಲಿದ್ದಾರೆ. ಅವರ ಜೊತೆಗೆ ಪ್ರಸಿದ್ಧ ಕೃಷ್ಣಾ ಸಹ ತಂಡವನ್ನು ಸೇರಿಕೊಂಡಿದ್ದಾರೆ.