ದುಬೈ: ಟೀಂ ಇಂಡಿಯಾ ಮತ್ತು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಇತ್ತೀಚಿನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನ ಬೌಲಿಂಗ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ಉಳಿದುಕೊಂಡಿದ್ದಾರೆ. ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಇಂಗ್ಲೆಂಡ್ನ ಜೋ ರೂಟ್ ಅವರನ್ನು ಕೆಳಕ್ಕೆ ತಳ್ಳಿ ಬ್ಯಾಟಿಂಗ್ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಕಳೆದ ತಿಂಗಳು ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲು ಕಂಡರೂ ಟೆಸ್ಟ್ ಟೀಮ್ ರ್ಯಾಂಕಿಂಗ್ನಲ್ಲಿ ಒಂದನೇ ಸ್ಥಾನದಲ್ಲೇ ಮುಂದುವರೆದಿದೆ.
ಅಶ್ವಿನ್ ಕೆಂಪು ಬಾಲ್ ಕ್ರಿಕೆಟ್ ಆಡದೇ ಬಹಳ ಸಮಯವಾಗಿದೆ. ಇತ್ತೀಚೆಗೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಿದರೂ ಅಶ್ವಿನ್ಗೆ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಹೀಗಿದ್ದರೂ ಆಸ್ಟ್ರೇಲಿಯಾದ ಬೌಲರ್ಗಳು ಅಶ್ವಿನ್ ಅವರನ್ನು ಹಿಂದಿಕ್ಕಿರುವಲ್ಲಿ ವಿಫಲರಾಗಿದ್ದಾರೆ. ಅಶ್ವಿನ್ ಬೌಲರ್‌ಗಳಲ್ಲಿ ತಮ್ಮ ವಿಶ್ವದ ನಂಬರ್ 1 ಪಟ್ಟವನ್ನು 860 ಅಂಕಗಳಿಂದ ಉಳಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು 826 ಅಂಕ ಪಡೆದುಕೊಂಡಿದ್ದು, ಎರಡು ಸ್ಥಾನಗಳ ಏರಿಕೆ ಕಂಡು ದ್ವಿತೀಯ ಶ್ರೇಯಾಂಕವನ್ನು ಅಲಂಕರಿಸಿದ್ದಾರೆ.
434 ಅಂಕಗಳೊಂದಿಗೆ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಅಗ್ರಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ಅಶ್ವಿನ್ ಎರಡನೇ ಸ್ಥಾನದಲ್ಲಿ ಮುಂದುವರಿದರೆ, ಅಕ್ಷರ್ ಪಟೇಲ್ ಆಲ್ ರೌಂಡರ್ ಗಳಲ್ಲಿ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಭವಿಸಿದ ಕಾರು ಅಪಘಾತದ ನಂತರ ಆಟದಿಂದ ಹೊರಗುಳಿದಿರುವ ರಿಷಭ್ ಪಂತ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ 10 ನೇ ಸ್ಥಾನದಲ್ಲಿ ಇದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕ್ರಮವಾಗಿ 12 ಮತ್ತು 14 ನೇ ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ.