ನವದೆಹಲಿ: ಶ್ರೀಲಂಕಾ ವಿರುದ್ಧ ಜುಲೈ 13ರಿಂದ ಆರಂಭವಾಗಲಿರುವ ಕ್ರಿಕೆಟ್ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಘೋಷಿಸಿದೆ. ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ಗೆ ನಾಯಕನ ಪಟ್ಟ ಒಲಿದಿದ್ದು, ವೇಗದ ಬೌಲರ್ ಭುವನೇಶ್ವರ್ ಕುಮಾರ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ಧವನ್ ನಾಯಕತ್ವದಲ್ಲಿ ಶ್ರೀಲಂಕಾ ವಿರುದ್ಧ ಭಾರತ 3 ಏಕದಿನ ಹಾಗೂ 3 ಟಿ-20 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಕನ್ನಡಿಗರಾದ ದೇವದತ್ತ್ ಪಡಿಕ್ಕಲ್, ಕೃಷ್ಣಪ್ಪ ಗೌತಮ್ಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ದೊರೆತಿದೆ. ಅಲ್ಲದೆ ಯುವ ಆಟಗಾರರಾದ ಚೇತನ್ ಸಕಾರಿಯಾ, ರುತುರಾಜ್ ಗಾಯಕ್ವಾಡ್, ನಿತೀಶ್ ರಾಣಾ ಕೂಡ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದ ತಂಡವು ಸದ್ಯ ಇಂಗ್ಲೆಂಡ್ನಲ್ಲಿದ್ದು ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಹಾಗೂ ಬಳಿಕ ಆಂಗ್ಲರ ವಿರುದ್ಧ ಟೆಸ್ಟ್ ಸರಣಿ ಆಡಲಿರುವ ಹಿನ್ನೆಲೆಯಲ್ಲಿ ಇದೇ ಸಂದರ್ಭದಲ್ಲಿ ನಡೆಯುವ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾದ ಮತ್ತೊಂದು ತಂಡ ಇದಾಗಿದೆ. ಜುಲೈ 13, 16 ಹಾಗೂ 18ರಂದು ಏಕದಿನ ಪಂದ್ಯಗಳು ಹಾಗೂ ಜುಲೈ 21, 23 ಹಾಗೂ 25ರಂದು ಟಿ-20 ಪಂದ್ಯಗಳು ನಡೆಯಲಿದೆ. ಕೊರೊನಾ ಕಾರಣದಿಂದ ಶ್ರೀಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿಯೇ ಎಲ್ಲಾ ಪಂದ್ಯಗಳಿವೆ.