ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಬೆನ್ನಲ್ಲೇ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಅದಕ್ಕೋಸ್ಕರ ಭಾರತೀಯ ಆಯ್ಕೆ ಮಂಡಳಿ ತಂಡ ಪ್ರಕಟಿಸಿದ್ದು, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಹಾಗೂ ವಿಕೆಟ್ ಕೀಪರ್ ಕಮ್ ಬ್ಯಾಟರ್ ಪಂತ್ಗೆ ವಿಶ್ರಾಂತಿ ನೀಡಿದೆ. ಆಗಸ್ಟ್ 18ರಿಂದ ಈ ಸರಣಿ ಆರಂಭಗೊಳ್ಳಲಿದ್ದು, ಆಗಸ್ಟ್ 22ರಂದು ಕೊನೆಯ ಪಂದ್ಯ ನಡೆಯಲಿದೆ.
ಭಾರತ ತಂಡ ಇಂತಿದೆ:ಶಿಖರ್ ಧವನ್(ಕ್ಯಾಪ್ಟನ್), ಋತುರಾಜ್ ಗಾಯಕ್ವಾಡ, ಶುಬ್ಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್(ವಿ.ಕೀ), ಸಂಜು ಸ್ಯಾಮನ್ಸ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹರ್
ವೆಸ್ಟ್ ಇಂಡೀಸ್ ವಿರುದ್ಧ ತಂಡ ಮುನ್ನಡೆಸಿದ್ದ ಶಿಖರ್ ಧವನ್ಗೆ ಮತ್ತೊಮ್ಮೆ ನಾಯಕತ್ವ ಜವಾಬ್ದಾರಿ ನೀಡಿದ್ದಾರೆ. ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಮಿಂಚು ಹರಿಸಿದ್ದ ರಾಹುಲ್ ತ್ರಿಪಾಠಿಗೆ ಅವಕಾಶ ನೀಡಲಾಗಿದೆ. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸಹ ಅವಕಾಶ ಪಡೆದುಕೊಂಡಿದ್ದಾರೆ. 2016ರ ಬಳಿಕ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದು, ಉಭಯ ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿರಿ:ZIM vs IND: ಆರು ವರ್ಷಗಳ ಬಳಿಕ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ
ಬರೋಬ್ಬರಿ ಆರು ವರ್ಷಗಳ ಬಳಿಕ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದು, ಐಸಿಸಿ ಸೂಪರ್ ಲೀಗ್ ಭಾಗವಾಗಿ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿವೆ. ಕನ್ನಡಿಗ ಕೆ ಎಲ್ ರಾಹುಲ್ ಸಹ ಹೊರಗುಳಿದಿದ್ದು, ಖಾಯಂ ನಾಯಕ ರೋಹಿತ್ ಶರ್ಮಾ ಈ ಸರಣಿಯಲ್ಲಿ ಭಾಗಿಯಾಗುತ್ತಿಲ್ಲ. ಉಭಯ ತಂಡಗಳ ನಡುವೆ ಹರಾರೆ ಮೈದಾನದಲ್ಲಿ ಆಗಸ್ಟ್ 18,20 ಹಾಗೂ 22ರಂದು ಪಂದ್ಯಗಳು ನಡೆಯಲಿವೆ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ನ ಭಾಗವಾಗಿ ಈ ಸರಣಿ ನಡೆಯಲಿದ್ದು, ವಿಶ್ವಕಪ್ಗೆ ನೇರ ಅರ್ಹತೆ ಪಡೆದುಕೊಳ್ಳಲು ಜಿಂಬಾಬ್ವೆಗೆ ಈ ಸರಣಿ ಮಹತ್ವ ಪಡೆದುಕೊಂಡಿದೆ. ಐಸಿಸಿ ಲೀಗ್ ಶ್ರೇಯಾಂಕದಲ್ಲಿ ಜಿಂಬಾಬ್ವೆ ಪ್ರಸ್ತುತ 12ನೇ ಸ್ಥಾನದಲ್ಲಿದೆ.