ಬೆಂಗಳೂರು: ಪ್ರವಾಸಿ ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ಭರ್ಜರಿ ಗೆಲುವು ದಾಖಲು ಮಾಡಿರುವ ರೋಹಿತ್ ಶರ್ಮಾ ಬಳಗ ನಾಳೆಯಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನಾಡಲು ಕಣಕ್ಕಿಳಿಯಲಿದೆ. ಗಾಯಾಳುಗಳಿಂದ ಕಂಗೆಟ್ಟಿರುವ ಸಿಂಹಳೀಯರ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸುವ ಫೆವರೆಟ್ ತಂಡವಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೇ-ನೈಟ್ ಟೆಸ್ಟ್ ಆರಂಭಗೊಳ್ಳಲಿದ್ದು, ರೋಹಿತ್ ಶರ್ಮಾಗೆ ಮೊದಲ ಟೆಸ್ಟ್ ಸರಣಿ ಗೆಲುವು ಮತ್ತು ತವರಿನಲ್ಲಿ ಸತತ 15ನೇ ಟೆಸ್ಟ್ ಸರಣಿ ಗೆಲ್ಲುವ ಗುರಿ ಹೊಂದಿದೆ. ಪಿಂಕ್ ಬಾಲ್ ಟೆಸ್ಟ್ ಆಗಿರುವ ಕಾರಣ ಜಯಂತ್ ಯಾದವ್ ಸ್ಥಾನಕ್ಕೆ ಆಲ್ರೌಂಡರ್ ಅಕ್ಷರ್ ಪಟೇಲ್ ಅಥವಾ ವೇಗಿ ಮೊಹಮ್ಮದ್ ಸಿರಾಜ್ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ.
ಗಾಯಾಳುಗಳಿಂದ ತತ್ತರಿಸಿರುವ ಶ್ರೀಲಂಕಾ ಭಾರತಕ್ಕೆ ಪ್ರತಿರೋಧ ತೋರುವಷ್ಟು ಸಾಮರ್ಥ್ಯ ಹೊಂದಿಲ್ಲ. ಈಗಾಗಲೇ ವೇಗಿ ಲಹಿರು ಕುಮಾರ್, ಸ್ಟಾರ್ ಬ್ಯಾಟರ್ ನಿಸ್ಸಾಂಕ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದಾರೆ. ಇದರ ಜೊತೆಗೆ ಚಮೀರಾ ಸೇವೆ ಕೂಡ ಅಲಭ್ಯವಾಗಲಿದೆ.
2022ರಲ್ಲಿ ಕೊನೆಯ ತವರು ಟೆಸ್ಟ್: ಟೀಂ ಇಂಡಿಯಾಗೆ 2022ರಲ್ಲಿ ಇದು ಕೊನೆಯ ತವರು ನೆಲದ ಟೆಸ್ಟ್. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ಇನ್ನೂ ಏಳು ಟೆಸ್ಟ್ ಪಂದ್ಯಗಳನ್ನಾಡಲಿದ್ದು, ಅದರಲ್ಲಿ ಎರಡು ಪಂದ್ಯ ಬಾಂಗ್ಲಾದೇಶ ತದನಂತರ ಆಸ್ಟ್ರೇಲಿಯಾದಲ್ಲಿ 2023ರಲ್ಲಿ ನಡೆಯಲಿವೆ.
ಇದನ್ನೂ ಓದಿ:IPLಗೆ ರಿಎಂಟ್ರಿ ಕೊಟ್ಟ ಯಾರ್ಕರ್ ಕಿಂಗ್: ರಾಜಸ್ಥಾನ ರಾಯಲ್ಸ್ ಪಾಳಯ ಸೇರಿದ ಮಲಿಂಗ
ದಾಖಲೆಯ ಹೊಸ್ತಿಲಲ್ಲ 'ಸರ್ ಜಡೇಜಾ': ಮೊಹಾಲಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ರೆಕಾರ್ಡ್ ಬರೆದಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಇದೀಗ ಮತ್ತೊಂದು ದಾಖಲೆಯ ಹೊಸ್ತಿಲಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 250 ವಿಕೆಟ್ ಮೈಲಿಗಲ್ಲು ತಲುಪಲು ಜಡೇಜಾಗೆ 9 ವಿಕೆಟ್ಗಳ ಅವಶ್ಯಕತೆ ಇದ್ದು, ನಾಳೆಯಿಂದ ಆರಂಭಗೊಳ್ಳಲಿರುವ ಹೊನಲು ಬೆಳಕಿನ ಟೆಸ್ಟ್ನಲ್ಲಿ ಈ ಸಾಧನೆ ಬರೆಯುವ ಸಾಧ್ಯತೆ ಇದೆ.