ಕೊಲಂಬೊ (ಶ್ರೀಲಂಕಾ) :ಪುರುಷರ ಉದಯೋನ್ಮುಖ ಏಷ್ಯಾಕಪ್ 2023ರ ಸೆಮಿಫೈನಲ್ 2 ಪಂದ್ಯದಲ್ಲಿ ಭಾರತ ಎ ಮತ್ತು ಬಾಂಗ್ಲಾದೇಶ ಎ ತಂಡಗಳು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಬಾಂಗ್ಲಾದೇಶ ಎ ತಂಡದ ನಾಯಕ ಸೈಫ್ ಹಸನ್, ಮೊದಲು ಭಾರತವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ಎ ತಂಡವು ಸೀಮಿತ 49.1 ಓವರ್ನಲ್ಲಿ ಅಲೌಟ್ ಆಗುವ ಮೂಲಕ ಬಾಂಗ್ಲಾ ತಂಡಕ್ಕೆ 211 ರನ್ಗಳ ಟಾರ್ಗೆಟ್ ನೀಡಿದೆ.
ಬಾಂಗ್ಲಾ ಪರ ಬೀಗಿ ಬೌಲಿಂಗ್ ದಾಳಿ ಮುಂದುವರೆಸಿರುವ ಬೌಲರ್ಸ್ ಭಾರತ ತಂಡದ ರನ್ ವೇಗಕ್ಕೆ ಬ್ರೇಕ್ ಹಾಕಿದ್ದಾರೆ. ಅತ್ಯಂತ ನಿಧಾನಗತಿಯ ಆರಂಭ ಶುರು ಮಾಡಿದ ಭಾರತ ಸಾಯಿ ಸುದರ್ಶನ್ 21 ರನ್ಗೆ ತಂಜೀಮ್ ಹಸನ್ ಸಾಕಿಬ್ ಬೌಲಿಂಗ್ ವಿಕೆಟ್ ಒಪ್ಪಿಸಿದರೆ, 34 ರನ್ ಹೊಡೆದಿದ್ದ ಅಭಿಷೇಕ್ ಶರ್ಮಾ ಸಾಕಿಬ್ ಬಿ ರಾಕಿಬುಲ್ ಹಸನ್ಗೆ ವಿಕೆಟ್ ನೀಡಿದರು. ಸೈಫ್ ಹಾಸನ್ ಬೌಲಿಂಗ್ನಲ್ಲಿ ನಿಕಿನ್ ಜೋಸ್ 17 ರನ್ಗೆ ಆಟ ನಿಲ್ಲಿಸಿ ಪೆವಿಲಿಯನ್‌ಗೆ ಮರಳಿದರು. ನಿಶಾಂತ್ ಸಿಂಧು 2 ರನ್ ಗಳಿಸಿ ರಕಿಬುಲ್ ಹಸನ್ ಎಸೆತದಲ್ಲಿ ಔಟ್ ಆಗಿದ್ದು, ತಂಡಕ್ಕೆ ಆಸರೆಯಾಗಬೇಕಿದ್ದ ರಿಯಾನ್ ಪರಾಗ್ ಕೂಡ 12 ರನ್ಗೆ ಹಸನ್ ಸಾಕಿಬ್ ಬೌಲಿಂಗ್ನಲ್ಲಿ ತಂಜಿಮ್ಗೆ ಕ್ಯಾಚ್ ಕೊಟ್ಟರು.
ಇನ್ನು ಮಹೇದಿ ಹಸನ್ ಎಸೆತದಲ್ಲಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಧ್ರುವ್ ಜುರೆಲ್ ಕೇವಲ ಒಂದೇ ಒಂದು ರನ್ ಹೊಡೆದು ಎಲ್ಬಿಡಬ್ಲ್ಯೂಗೆ ಬಲಿಯಾದರು. ಬಳಿಕ ಹರ್ಷಿತ್ ರಾಣಾ ಕೂಡ 9 ರನ್ ಇರುವಾಗ ಮಹೇದಿ ಹಸನ್ಗೆ ವಿಕೆಟ್ ಒಪ್ಪಿಸಿದರು. ಮಾನವ್ ಸುತಾರ್ 21 ರನ್ ಆಟವಾಡುವಾಗ ರನ್ ಔಟ್ ಆದರೆ, ಬಳಿಕ ಬಂದ ಆರ್.ಎಸ್ ಹಂಗಾರಗೇಕರ 15 ರನ್ ಪೇರಿಸಿ ಸೌಮ್ಯ ಸರ್ಕಾರ್ ಎಸೆತದಲ್ಲಿ ಪೆವಿಲಿಯನ್ ಕಡೆ ಹಜ್ಜೆ ಹಾಕಿದರು. ಮತ್ತೊಂದು ಕಡೆ ವಿಕೆಟ್ ಬೀಳುತ್ತಿದ್ದರೂ ವಿಕೆಟ್ ನೀಡದೆ ಯುಎಇ ಎ ತಂಡದ ವಿರುದ್ಧ ಅಬ್ಬರದ ಆಟವಾಡಿ ಶತಕ ಸಿಡಿಸಿದ್ದ, ನಾಯಕ ಯಶ್ ಧುಲ್ ಅರ್ಧಶತಕ ಪೂರೈಸಿದ್ದು, ತಂಡಕ್ಕೆ 66 ರನ್ ಕೊಡುಗೆ ನೀಡಿ ತಂಡಕ್ಕೆ ಆಸರೆಯಾದರು.