ಡೊಮಿನಿಕಾ (ವೆಸ್ಟ್ಇಂಡೀಸ್):ನಾಳೆಯಿಂದ (ಜುಲೈ 12) ಭಾರತ- ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಆರಂಭವಾಗಲಿದೆ. ಉಭಯ ತಂಡಗಳು ಭರ್ಜರಿ ತಾಲೀಮು ನಡೆಸುತ್ತಿವೆ. ಇತ್ತ ಒಂದು ತಿಂಗಳ ವಿರಾಮದ ಬಳಿಕ ಭಾರತ ತಂಡ ಮತ್ತೆ ಮೈದಾನಕ್ಕೆ ಇಳಿಯುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸೋಲಿನ ಬಳಿಕದ ಮೊದಲ ಟೆಸ್ಟ್ ಸರಣಿ ಇದಾಗಿದೆ. ಸರಣಿ ಗೆಲುವಿಗಾಗಿ ಕಸರತ್ತು ನಡೆಸುತ್ತಿರುವ ಟೀಂ ಇಂಡಿಯಾ ವಿಶೇಷವಾಗಿ ಫೀಲ್ಡಿಂಗ್, ಕ್ಯಾಚಿಂಗ್ ಅಭ್ಯಾಸ ನಡೆಸಿದ್ದು ಇದರ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಇತ್ತಂಡಗಳು ಪಂದ್ಯ ನಡೆಯುವ ಡೊಮಿನಿಕಾದ ವಿಂಡ್ಸೋರ್ ಪಾರ್ಕ್ ಮೈದಾನದಲ್ಲಿ ಬೀಡುಬಿಟ್ಟಿದ್ದು, ಅಲ್ಲಿಯೇ ಅಭ್ಯಾಸ ನಡೆಸುತ್ತಿದ್ದಾರೆ. ಭಾರತದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ, ಬ್ಯಾಟಿಂಗ್ ಸೆನ್ಸೇಷನ್ ಶುಭ್ಮನ್ ಗಿಲ್ ಅವರ ಜೊತೆಗೂಡಿ ಅಜಿಂಕ್ಯ ರಹಾನೆ, ವಿಕೆಟ್ ಕೀಪರ್ಗಳಾದ ಭರತ್, ಇಶಾನ್ ಕಿಶನ್, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಮೂರು ತುದಿಗಳುಳ್ಳ ಬಣ್ಣಬಣ್ಣದ ಕೋಲಿನಿಂದ ಕ್ಯಾಚ್ ಹಿಡಿಯುವ ಅಭ್ಯಾಸ ಮಾಡಿದ್ದಾರೆ.
ಇದರ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, "ಇದು ವರ್ಣರಂಜಿತ ಫೀಲ್ಡಿಂಗ್ ಕಸರತ್ತು. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ಗೆ ಮುಂಚಿತವಾಗಿ ಟೀಂ ಇಂಡಿಯಾ ಸಿದ್ಧತೆ ನಡೆಸುತ್ತಿದೆ" ಎಂಬ ಶೀರ್ಷಿಕೆ ನೀಡಿದೆ. ಈ ಫೀಲ್ಡಿಂಗ್ಗೆ ಕೋಚ್ ರಾಹುಲ್ ದ್ರಾವಿಡ್ ಕೂಡ ಬಳಿಕ ಜೊತೆಯಾಗಿದ್ದಾರೆ.
ವಿಂಡೀಸ್ ಯುವ ಕ್ರಿಕೆಟಿಗರಿಗೆ ಪಾಠ:ಟೀಂ ಇಂಡಿಯಾ ಅಭ್ಯಾಸದ ವೇಳೆ ಕೆರೆಬಿಯನ್ ಯುವ ಕ್ರಿಕೆಟಿಗರು ಹಿರಿಯ ಆಟಗಾರರಿಂದ ನೆರವು ಪಡೆದುಕೊಂಡರು. ಅಭ್ಯಾಸದ ವೇಳೆ ಕ್ರಿಕೆಟ್ ಪಾಠಗಳನ್ನು ಕಲಿತರು. ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿಯೊಂದಿಗೆ ಆಟೋಗ್ರಾಫ್ ತೆಗೆದುಕೊಳ್ಳುವುದರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.