ಮೊಹಾಲಿ(ಪಂಜಾಬ್):ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಪ್ರವಾಸಿ ಶ್ರೀಲಂಕಾ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ನಡೆಸುತ್ತಿರುವ ರೋಹಿತ್ ಪಡೆ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 357ರನ್ಗಳಿಕೆ ಮಾಡಿದೆ.
ಭಾರತದ ಪರ ವಿಕೆಟ್ ಕೀಪರ್ ರಿಷಭ್ ಪಂತ್ 96, ಹನುಮ ವಿಹಾರಿ 58 ರನ್ಗಳಿಕೆ ಮಾಡಿದ್ರೆ, 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ವಿರಾಟ್ ಕೊಹ್ಲಿ 45 ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು.
ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸಿದ ಕನ್ನಡಿಗ ಮಯಾಂಕ್ ಅಗರವಾಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ ನಷ್ಟಕ್ಕೆ 52ರನ್ಗಳಿಕೆ ಮಾಡಿತು. 29ರನ್ಗಳಿಕೆ ಮಾಡಿದ್ದ ಕ್ಯಾಪ್ಟನ್ ರೋಹಿತ್ ಲಾಹೀರು ಕುಮಾರ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದ್ರೆ, ಇದರ ಬೆನ್ನಲ್ಲೇ ಮಯಾಂಕ್ 33ರನ್ಗಳಿಸಿ ಔಟಾದರು.
ಇದನ್ನೂ ಓದಿ:ನರ್ವಸ್ 90 ಸಮಸ್ಯೆ: ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಸೆಂಚುರಿ ತಪ್ಪಿಸಿಕೊಂಡ ರಿಷಬ್ ಪಂತ್
ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ವಿಹಾರಿ-ವಿರಾಟ್:ಚೇತೇಶ್ವರ ಪೂಜಾರಿ ಜಾಗದಲ್ಲಿ ಸ್ಥಾನ ಪಡೆದುಕೊಂಡು ಬ್ಯಾಟ್ ಬೀಸಿದ ಹನುಮ ವಿಹಾರಿ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿದರು. ಮಾಜಿ ಕ್ಯಾಪ್ಟನ್ ವಿರಾಟ್ ಜೊತೆ ಸೇರಿ 58ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ 100ನೇ ಟೆಸ್ಟ್ ಪಂದ್ಯವನ್ನಾಡಿದ ವಿರಾಟ್ 45 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಟೆಸ್ಟ್ನಲ್ಲಿ 8 ಸಾವಿರ ರನ್ ಪೂರೈಸಿದರು.
ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್:ವಿರಾಟ್ ವಿಕೆಟ್ ಪತನವಾಗ್ತಿದ್ದಂತೆ ಮೈದಾನಕ್ಕೆ ಬಂದ ವಿಕೆಟ್ ಕೀಪರ್ ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ತಾವು ಎದುರಿಸಿದ 97 ಎಸೆತಗಳಲ್ಲಿ 4 ಸಿಕ್ಸರ್, 9 ಬೌಂಡರಿ ಸೇರಿದಂತೆ 96ರನ್ಗಳಿಕೆ ಮಾಡಿ ಲಕ್ಮಲ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ರಹಾನೆ ಸ್ಥಾನದಲ್ಲಿ ಅವಕಾಶ ಪಡೆದು ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ 27ರನ್ಗಳಿಗೆ ಔಟಾದರು.
ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡ ಜಡೇಜಾ-ಅಶ್ವಿನ್:45ರನ್ಗಳಿಕೆ ಮಾಡಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ 10ರನ್ಗಳಿಕೆ ಮಾಡಿರುವ ರವಿಚಂದ್ರನ್ ಅಶ್ವಿನ್ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಶ್ರೀಲಂಕಾ ಪರ ಲಸಿಂತ್ 2 ವಿಕೆಟ್ ಪಡೆದುಕೊಂಡಿದ್ದು, ಉಳಿದಂತೆ ಲಕ್ಮಲ್, ಫರ್ನಾಡೋ,ಲಾಹೀರು ಕುಮಾರ್ ಹಾಗೂ ಸಿಲ್ವಾ ತಲಾ 1ವಿಕೆಟ್ ಕಬಳಿಕೆ ಮಾಡಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ನ ಮೊದಲ ದಿನದಂತ್ಯಕ್ಕೆ ಭಾರತ ಮೊದಲ ಇನಿಂಗ್ಸ್ನಲ್ಲಿ 6 ವಿಕೆಟ್ಗೆ 357 ರನ್ ಗಳಿಸಿದೆ. ಭಾರತದ ಪರ ರಿಷಬ್ ಪಂತ್ 96, ಹನುಮ ವಿಹಾರಿ 58 ರನ್ ಗಳಿಸಿದರೆ, 100ನೇ ಟೆಸ್ಟ್ ಆಡುತ್ತಿರುವ ವಿರಾಟ್ ಕೊಹ್ಲಿ 45 ರನ್ ಗಳಿಸಿದರು. ದಿನದಾಟದ ಅಂತ್ಯಕ್ಕೆ ರವೀಂದ್ರ ಜಡೇಜಾ 45 ರನ್ ಗಳಿಸಿದ್ದರೆ, ರವಿಚಂದ್ರನ್ ಅಶ್ವಿನ್ 10 ರನ್ ಗಳಿಸಿದ್ದರು. ಶ್ರೀಲಂಕಾ ಪರ ಲಸಿತ್ ಅಂಬಲ್ಡೆನಿಯಾ ಎರಡು ವಿಕೆಟ್ ಪಡೆದರು.