ಹೈದರಾಬಾದ್: ಟೀಮ್ ಇಂಡಿಯಾದ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಪ್ರೋಟೀಸ್ ವಿರುದ್ಧ ಸೆಂಚುರಿಯನ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಭಾರತ ತಂಡವನ್ನು ಮತ್ತೆ ಸೇರಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ವಾರ ಮೂರು ದಿನಗಳ ಅಭ್ಯಾಸ ಪಂದ್ಯದ ನಡುವೆ ಕೌಟುಂಬಿಕ ತುರ್ತಿನ ಹಿನ್ನೆಲೆಯಲ್ಲಿ ಅವರು ಭಾರತಕ್ಕೆ ಮರಳಿದ್ದರು.
ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಕೊಹ್ಲಿ, ಫೈನಲ್ ಸೋಲಿನ ನಂತರ ಮತ್ತೆ ಟೆಸ್ಟ್‌ನಲ್ಲಿ ಮೈದಾನಕ್ಕಿಳಿಯುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ 50+ ಸರಾಸರಿ ಬ್ಯಾಟಿಂಗ್ ಇತಿಹಾಸ ಹೊಂದಿರುವ ವಿರಾಟ್, ಸೆಂಚುರಿಯನ್ ಟೆಸ್ಟ್‌ನಲ್ಲಿ ತಮ್ಮ ಲಯ ಮುಂದುವರೆಸುವ ನಿರೀಕ್ಷೆ ಇದೆ.
ಟೆಸ್ಟ್ ಚಾಂಪಿಯನ್‌ಶಿಪ್ 2025:2023-25 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಮೂರನೇ ಆವೃತ್ತಿಯ ಭಾಗವಾಗಿ ಭಾರತದ ಎರಡನೇ ಟೆಸ್ಟ್ ಸರಣಿ ಇದಾಗಿದೆ. ಈಗಾಗಲೇ ವೆಸ್ಟ್ ಇಂಡೀಸ್ನಲ್ಲಿ ನಡೆದ ಮೊದಲ ಸರಣಿಯನ್ನು 1-0ಯಿಂದ ಗೆದ್ದುಕೊಂಡಿರುವ ಭಾರತ, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಕಳೆದೆರಡು ಬಾರಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿದ ಭಾರತ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು.
ಕಳೆದ ಡಬ್ಲ್ಯುಟಿಸಿ ಆವೃತ್ತಿಯಲ್ಲಿ ವಿರಾಟ್ 30 ಇನ್ನಿಂಗ್ಸ್‌ಗಳಿಂದ 932 ರನ್ ಗಳಿಸಿ ದೇಶದ ಆಟಗಾರರ ಪೈಕಿ ಟಾಪ್ ಸ್ಕೋರರ್ ಆಗಿದ್ದರು. 2023ರ ಆರಂಭಕ್ಕೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ಗಳಲ್ಲಿ ವಿರಾಟ್ ಈಗಾಗಲೇ ಒಂದು ಶತಕ ಮತ್ತು ಅರ್ಧಶತಕ ಗಳಿಸಿದ್ದಾರೆ.
ಈ ವರ್ಷ ಏಳು ಟೆಸ್ಟ್‌ಗಳಲ್ಲಿ ವಿರಾಟ್ 55.70 ಸರಾಸರಿಯಲ್ಲಿ ಎರಡು ಶತಕ ಮತ್ತು ಅರ್ಧಶತಕದೊಂದಿಗೆ 557 ರನ್ ಪೇರಿಸಿದ್ದಾರೆ. ಇವರ ಅತ್ಯುತ್ತಮ ಸ್ಕೋರ್ 186. ಅಲ್ಲದೇ ತವರಿನಲ್ಲಿ ನಡೆದ ವಿಶ್ವಕಪ್ನಲ್ಲಿ ವಿರಾಟ್ ಮೂರು ಶತಕಗಳು ಮತ್ತು ಆರು ಅರ್ಧಶತಕ ಸೇರಿ 765 ರನ್ ಗಳಿಸಿದ್ದಾರೆ. ಈ ಮೂಲಕ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಹರಿಣಗಳ ವಿರುದ್ಧ ಕೊಹ್ಲಿ:ವಿರಾಟ್ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. 29 ಟೆಸ್ಟ್ ಶತಕಗಳಲ್ಲಿ ಎರಡನ್ನು ದಕ್ಷಿಣ ಆಫ್ರಿಕಾದಲ್ಲೇ ಗಳಿಸಿದ್ದಾರೆ. ಕೊಹ್ಲಿ 50ಕ್ಕಿಂತ ಹೆಚ್ಚು ಸರಾಸರಿಯನ್ನು ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಹೊಂದಿದ್ದಾರೆ. ಹರಿಣಗಳ ವಿರುದ್ಧದ 7 ಟೆಸ್ಟ್‌ನಲ್ಲಿ 719 ರನ್ ಗಳಿಸಿದ್ದಾರೆ.
ಇದನ್ನೂ ಓದಿ:ಏಕೈಕ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಭಾರತದ ವನಿತೆಯರಿಗೆ 8 ವಿಕೆಟ್ ಜಯ, ಮೊದಲ ಗೆಲುವಿನ ಸಿಂಚನ