ಸೆಂಚುರಿಯನ್: ಶಮಿ ಸೇರಿದಂತೆ ವೇಗಿಗಳ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಪ್ರವಾಸಿ ಭಾರತ ತಂಡ ಅತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 197ಕ್ಕೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದು, 130 ರನ್ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.
ಮೊದಲ ದಿನ ಭಾರತ ತಂಡ 272 ರನ್ಗಳಿಸಿದರೆ, 2ನೇ ದಿನದಾಟ ಮಳೆಗೆ ಸಂಪೂರ್ಣ ಆಹುತಿಯಾದರೆ 3ನೇ ದಿನ ಭಾರತ ಹಿಂದಿನ ಮೊತ್ತಕ್ಕೆ ಕೇವಲ 55 ರನ್ ಸೇರಿಸಿ ಆಲೌಟ್ ಆಗಿತ್ತು. ಕೆ ಎಲ್ ರಾಹುಲ್ 123, ಮಯಾಂಕ್ ಅಗರ್ವಾಲ್ 60 ಮತ್ತು ರಹಾಣೆ 48 ರನ್ಗಳಿಸಿದ್ದರು.
ದಕ್ಷಿಣ ಆಫ್ರಿಕಾ ಪರ ಲುಂಗಿ ಎಂಗಿಡಿ 71ಕ್ಕೆ 6 ಮತ್ತು ಕಗಿಸೊ ರಬಾಡ 72ಕ್ಕೆ 3 ವಿಕೆಟ್ ಹಾಗೂ ಮ್ಯಾಕ್ರೋ ಜಾನ್ಸನ್ 69ಕ್ಕೆ 1 ವಿಕೆಟ್ ಪಡೆದಿದ್ದರು.
ಇತ್ತ ಭಾರತದ 327 ರನ್ಗಳನ್ನು ಹಿಂಬಾಲಿಸಿದ ಅತಿಥೇಯ ತಂಡ ಆರಂಭದಿಂದಲೇ ಭಾರತದ ವೇಗಿಗಳ ದಾಳಿಗೆ ತತ್ತರಿಸಿ ಹೋಯಿತು. ಮೊದಲ ಓವರ್ನಲ್ಲೇ ಭಾರತದ ನಂಬರ್ 1 ವೇಗಿ ಜಸ್ಪ್ರೀತ್ ಬುಮ್ರಾ ಆರಂಭಿಕ ಡೀನ್ ಎಲ್ಗರ್(1) ವಿಕೆಟ್ ಉಡಾಯಿಸಿದರು.
ನಂತರ ಶಮಿ 5 ರನ್ಗಳ ಅಂತರದಲ್ಲಿ ಕೀಗನ್ ಪೀಟರ್ಸನ್(13) ಮತ್ತು ಐಡೆನ್ ಮಾರ್ಕ್ರಮ್(15) ವಿಕೆಟ್ ಪಡೆದು ಹರಿಣಗಳಿಗೆ ಭಾರಿ ಆಘಾತವನ್ನುಂಟು ಮಾಡಿದರು. ಮೊಹಮ್ಮದ್ ಸಿರಾಜ್ ತಮ್ಮ ಮೊದಲ ಸ್ಪೆಲ್ನಲ್ಲೇ ಹರಿಣಗಳ ಆಪತ್ಪಾಂಧವನಾಗಿದ್ದ ರಾಸಿ ವ್ಯಾನ್ ಡರ್ ಡಾಸೆನ್(3)ವಿಕೆಟ್ ಪಡೆದರು.