ಕೇಪ್ ಟೌನ್ (ದಕ್ಷಿಣ ಆಫ್ರಿಕಾ):ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡನೇ ಮತ್ತು ಅಂತಿಮ ಬಾಕ್ಸಿಂಗ್ ಡೇ ಟೆಸ್ಟ್ ಮೊದಲ ದಿನವೇ ಕುತೂಹಲ ಘಟ್ಟಕ್ಕೆ ತಲುಪಿದೆ. ಬುಧವಾರದ ದಿನದಾಟ ಅಂತ್ಯಕ್ಕೆ 23 ವಿಕೆಟ್ಗಳು ಪತನವಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಹರಿಣಗಳ ಪಡೆ 55 ರನ್‌ಗಳಿಗೆ ಸರ್ವಪತನ ಕಂಡಿತ್ತು. ಮತ್ತೊಂದೆಡೆ, ಭಾರತ ತನ್ನ ಮೊದಲ ಇನ್ನಿಂಗ್ಸ್ ಅನ್ನು 153 ರನ್‌ಗಳಿಗೆ ಮುಗಿಸಿತ್ತು. ದಕ್ಷಿಣ ಆಫ್ರಿಕಾ ತನ್ನ ಎರಡನೇ ಇನ್ನಿಂಗ್ ಆಡುತ್ತಿದೆ. ಆದರೆ, 62 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು 36 ರನ್‌ಗಳ ಹಿನ್ನಡೆಯನ್ನು ಹೊಂದಿದೆ.
ಕೇಪ್ ಟೌನ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿತ್ತು. ಆದರೆ, ಮೊಹಮ್ಮದ್ ಸಿರಾಜ್ ದಾಳಿಗೆ ಪತರುಗುಟ್ಟಿದ ಹರಿಣಗಳು 55 ರನ್‌ಗಳಿಗೆ ತಮ್ಮ ಮೊದಲ ಇನ್ನಿಂಗ್ಸ್ ಮುಗಿಸಿದ್ದರು. ನಂತರ ತನ್ನ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಅಲ್ಲದೇ, ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಹೊರತುಪಡಿಸಿ ಉಳಿದ ಯಾವುದೇ ಆಟಗಾರರು ಖಾತೆಯನ್ನೇ ತೆರೆಯಲಿಲ್ಲ.
ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್:ಆರಂಭಿಕ ಯಶಸ್ವಿ ಜೈಸ್ವಾಲ್ ಅವರು ಬೌಲರ್ ಕಗಿಸೊ ರಬಾಡ ಎಸೆತದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಬಳಿಕ ನಾಯಕ ರೋಹಿತ್ ಶರ್ಮಾ ತಂಡದ ಸ್ಕೋರ್ಅನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ, 50 ಎಸೆತಗಳಲ್ಲಿ 39 ರನ್ ಗಳಿಸಿದ್ದಾಗ ಅವರು ನಾಂದ್ರೆ ಬರ್ಗರ್ ಎಸೆತದಲ್ಲಿ ಮಾರ್ಕೊ ಜಾನ್ಸೆನ್‌ಗೆ ಕ್ಯಾಚಿತ್ತರು. ನಂತರದ ಬಂದ ಶುಭಮನ್ ಗಿಲ್ ಕೂಡ 55 ಬಾಲ್ಗಳಲ್ಲಿ 36 ರನ್ ಗಳಿಸಿ ನಾಂಡ್ರೆ ಬರ್ಗರ್ ಎಸೆತದಲ್ಲಿ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್ ಅವರನ್ನು ನಾಂದ್ರೆ ಬರ್ಗರ್ ಶೂನ್ಯಕ್ಕೆ ಪೆವಿಲಿಯನ್‌ಗೆ ಕಳುಹಿಸಿದರು. ಈ ಮೂಲಕ ಚಹಾ ವಿರಾಮದ ವೇಳೆಗೆ ಭಾರತ ತಂಡ 4 ವಿಕೆಟ್ ಕಳೆದುಕೊಂಡು 114 ರನ್‌ಗಳ ಪೇರಿಸಿತ್ತು.
ಆದರೆ, ಚಹಾ ವಿರಾಮದ ಬಳಿಕ ದಿಢೀರ್ ಕುಸಿತ ಕಂಡು ಕೇವಲ 39 ರನ್ ಗಳಿಸಲಷ್ಟೇ ಶಕ್ತವಾಯಿತು. ಕೆ.ಎಲ್. ರಾಹುಲ್ 8 ರನ್ಗೆ ವಿಕೆಟ್ ಒಪ್ಪಿಸಿದರು. ಕೊನೆಯ ಆರು ವಿಕೆಟ್ಗಳು ಒಂದೇ ಒಂದು ರನ್ ಗಳಿಸದೆ ಪತನಗೊಂಡವು. ರಾಹುಲ್ ಬಳಿಕ ಬ್ಯಾಟಿಂಗ್‌ಗೆ ಬಂದ ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಶೂನ್ಯ ಸುತ್ತಿದರು. ಇದರ ನಡುವೆ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 46 ರನ್ ಗಳಿಸಿ ಔಟಾದರು. ನಂತರದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಸಹ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ಗೆ ಮರಳಿದರು. ಇದರಿಂದ ಅಂತಿಮ 11 ಎಸೆತಗಳಲ್ಲಿ ಆರು ವಿಕೆಟ್ಗಳು ಉರುಳಿದವು. ಮುಖೇಶ್ ಕುಮಾರ್ ಅಜೇಯ (0) ಉಳಿಯುವ ಮೂಲಕ 34.5 ಓವರ್ಗಳಲ್ಲಿ 153 ರನ್‌ಗಳಿಗೆ ಭಾರತ ಆಲೌಟ್ ಆಯ್ತು. ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ, ಲುಂಗಿ ಗಿಡಿ, ನಾಂದ್ರೆ ಬರ್ಗರ್ ತಲಾ ಮೂರು ವಿಕೆಟ್ ಕಿತ್ತು ಮಿಂಚಿಸಿದರು.
ದಕ್ಷಿಣ ಆಫ್ರಿಕಾದ ಎರಡನೇ ಇನ್ನಿಂಗ್ಸ್:ಮತ್ತೊಂದೆಡೆ, 98 ರನ್‌ಗಳ ಹಿನ್ನಡೆಯೊಂದಿಗೆ ದಕ್ಷಿಣ ಆಫ್ರಿಕಾ ತಂಡ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿತು. ಆದರೆ, ಭಾರತೀಯ ಬೌಲರ್ಗಳ ದಾಳಿಗೆ ಮತ್ತೆ ಕುಸಿತ ಕಂಡಿತು. ಆರಂಭಿಕರಾದ ಐಡೆನ್ ಮಾರ್ಕ್ರಾಮ್, ನಾಯಕ ಡೀನ್ ಎಲ್ಗರ್ ಉತ್ತಮ ಆರಂಭ ಒದಗಿಸುವ ಪ್ರಯತ್ನ ಮಾಡಿದರು. ಆದರೆ, 12 ರನ್ ಗಳಿಸಿದ್ದ ಡೀನ್ ಎಲ್ಗರ್ ಅವರು ಮುಖೇಶ್ ಕುಮಾರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ಟೋನಿ ಡಿ ಜೊರ್ಜಿ ಅವರನ್ನೂ 1 ರನ್ಗೆ ಮುಖೇಶ್ ಪೆವಿಲಿಯನ್‌ಗೆ ಕಳುಹಿಸಿದರು. ಮತ್ತೊಂದೆಡೆ, ಟ್ರಿಸ್ಟಾನ್ ಸ್ಟಬ್ಸ್ ವಿಕೆಟ್ಅನ್ನು ಬುಮ್ರಾ ಪಡೆದು ಹರಿಣಗಳಿಗೆ ಶಾಕ್ ನೀಡಿದರು.
ಇದರಿಂದ ದಿನದಾಟ ಅಂತ್ಯಕ್ಕೆ 17 ಓವರ್ಗಳಲ್ಲಿ 62 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಮಾರ್ಕ್ರಾಮ್ (36 ರನ್) ಹಾಗೂ ಡೇವಿಡ್ ಬೆಡಿಂಗ್ಹ್ಯಾಮ್ (7 ರನ್) ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾ 36 ರನ್‌ಗಳ ಹಿನ್ನಡೆಯನ್ನು ಹೊಂದಿದೆ. ಇನ್ನು, ಮೊದಲ ಟೆಸ್ಟ್ ಗೆದ್ದಿರುವ ಹರಿಣಗಳ ಪಡೆ 1-0 ಮುನ್ನಡೆಯಲ್ಲಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 32 ರನ್‌ಗಳಿಂದ ಸೋಲನುಭವಿಸಿತ್ತು.
ಇದನ್ನೂ ಓದಿ:ಸಿರಾಜ್ ಮಾರಕ ಬೌಲಿಂಗ್ ದಾಳಿ; ಟೆಸ್ಟ್ ಇತಿಹಾಸದಲ್ಲೇ ಭಾರತದ ಎದುರು ಅಲ್ಪ ಮೊತ್ತಕ್ಕೆ ದಕ್ಷಿಣ ಆಫ್ರಿಕಾ ಸರ್ವಪತನ