ಹೈದರಾಬಾದ್: ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 3 ಟಿ20 ಪಂದ್ಯಗಳ ಸರಣಿಯನ್ನು ಆಡುತ್ತಿದೆ. ಈ ಸರಣಿಯ ಮೊದಲ ಟಿ20 ಪಂದ್ಯ ಭಾನುವಾರ ಮಳೆಯಿಂದಾಗಿ ರದ್ದಾಗಿತ್ತು. ಇದೀಗ ಎರಡನೇ ಟಿ20 ಪಂದ್ಯ ಡಿಸೆಂಬರ್ 12 ರಂದು (ಮಂಗಳವಾರ) ಸೇಂಟ್ ಜಾರ್ಜ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಈ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟುವ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ದಾಖಲೆಯನ್ನು ಮುರಿಯುವ ಅವಕಾಶ ಸೂರ್ಯ ಅವರಿಗೆ ಲಭಿಸಲಿದೆ. ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್ನಲ್ಲಿರುವ ಸೂರ್ಯಕುಮಾರ್ ಯಾದವ್ ತುಂಬಾ ಸುಲಭವಾಗಿ ದಾಖಲೆ ಮುರಿಯಲಿದ್ದಾರೆ.
ಏನದು ದಾಖಲೆ?: ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 2000 ರನ್ ಗಳಿಸಿದ ದಾಖಲೆಯಲ್ಲಿ ವಿರಾಟ್ ಕೊಹ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಭಾರತದ ಪರ ವೇಗವಾಗಿ 2000 ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ನಂತರ ಕೆಎಲ್ ರಾಹುಲ್ ಎರಡನೇ ಸ್ಥಾನದಲ್ಲಿದ್ದಾರೆ. ಇದೀಗ ಸೂರ್ಯಕುಮಾರ್ ಯಾದವ್ ತವರಿನ ಇಬ್ಬರು ಆಟಗಾರರನ್ನು ಹಿಂದಿಕ್ಕುವ ಸಾಧ್ಯತೆ ಇದೆ. ಸೂರ್ಯ ಅವರ 2000 ಅಂತಾರಾಷ್ಟ್ರೀಯ ಟಿ20 ರನ್ಗೆ ಕೇವಲ 15 ರನ್‌ಗಳ ಕೊರತೆ ಇದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 15 ರನ್ ಗಳಿಸಿದರೆ ವಿರಾಟ್ ರನ್ನು ಸರಿಗಟ್ಟಿ, ರಾಹುಲ್ ದಾಖಲೆ ಮುರಿಯಲಿದ್ದಾರೆ.