ಜೋಹಾನ್ಸ್ಬರ್ಗ್(ದಕ್ಷಿಣ ಆಫ್ರಿಕಾ):ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ನಲ್ಲಿ 229 ರನ್ಗಳಿಗೆ ಆಲೌಟ್ ಆಗಿದ್ದು, ಈ ಮೂಲಕ 27 ರನ್ಗಳ ಮುನ್ನಡೆ ಪಡೆದುಕೊಂಡಿದೆ.
ಇಲ್ಲಿನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ 202 ರನ್ಗಳಿಕೆ ಮಾಡಿ ಮೊದಲ ದಿನವೇ ಆಲೌಟ್ ಆಯಿತು. ಭಾರತದ ಇನ್ನಿಂಗ್ಸ್ಗೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಆಫ್ರಿಕಾ ತಂಡ ಪೀಟರ್ಸನ್ ಹಾಗೂ ತೆಂಬಾ ಬವುಮಾ ಅವರ ಅರ್ಧಶತಕದ ನೆರವಿನಿಂದ ತನ್ನೆಲ್ಲ ವಿಕೆಟ್ ಕಳೆದುಕೊಂಡು 229 ರನ್ಗಳಿಕೆ ಮಾಡಿದ್ದು, 27ರನ್ಗಳ ಮುನ್ನಡೆ ಸಾಧಿಸಿದೆ. ಭಾರತದ ಪರ ಶಾರ್ದೂಲ್ ಠಾಕೂರ್ 7 ವಿಕೆಟ್ ಪಡೆದರೆ, ಇವರಿಗೆ ಸಾಥ್ ನೀಡಿರುವ ಮೊಹಮ್ಮದ್ ಶಮಿ 2 ವಿಕೆಟ್ ಹಾಗೂ ಬುಮ್ರಾ 1 ವಿಕೆಟ್ ಕಬಳಿಸಿದರು.
7 ವಿಕೆಟ್ ಪಡೆದು ಮಿಂಚಿದ ಶಾರ್ದೂಲ್ ಠಾಕೂರ್
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮಧ್ಯಮ ವೇಗದ ಬೌಲರ್ ಶಾರ್ದೂಲ್ ಠಾಕೂರ್ 7 ವಿಕೆಟ್ ಪಡೆದು ಮಿಂಚಿದ್ದಾರೆ. ಜೊತೆಗೆ ಹರಿಣಗಳ ನಾಡಿನಲ್ಲಿ ಹರ್ಭಜನ್ ಬಳಿಕ ಒಂದೇ ಇನ್ನಿಂಗ್ಸ್ನಲ್ಲಿ ಇಷ್ಟೊಂದು ವಿಕೆಟ್ ಪಡೆದುಕೊಂಡಿರುವ ಭಾರತದ ಎರಡನೇ ಬೌಲರ್ ಆಗಿದ್ದಾರೆ. ಈ ಹಿಂದೆ 2010/11ರಲ್ಲಿ ಹರ್ಭಜನ್ ಸಿಂಗ್ ಕೇಪ್ಟೌನ್ನಲ್ಲಿ 7 ವಿಕೆಟ್ ಪಡೆದುಕೊಂಡಿದ್ದರು.
ಇದನ್ನೂ ಓದಿ:IND vs SA 2nd Test: ಠಾಕೂರ್ ಬಿರುಗಾಳಿಗೆ ಹರಿಣಗಳು ತತ್ತರ, ಚೊಚ್ಚಲ 5 ವಿಕೆಟ್ ಪಡೆದ 'ಲಾರ್ಡ್ ಶಾರ್ದೂಲ್'
ದಕ್ಷಿಣ ಆಫ್ರಿಕಾ ವಿರುದ್ಧ ನಾಗ್ಪುರದಲ್ಲಿ 2015/16ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆರ್. ಅಶ್ವಿನ್ 7 ವಿಕೆಟ್ ಪಡೆದುಕೊಂಡಿದ್ದರು. ಇದಕ್ಕೂ ಮುಂಚೆ 2004/05(ಕೋಲ್ಕತ್ತಾ) ಹಾಗೂ 2010/11(ಕೇಪ್ಟೌನ್)ರಲ್ಲಿ ಭಜ್ಜಿ 7 ವಿಕೆಟ್ ಸಾಧನೆ ಮಾಡಿದ್ದಾರೆ.