ಹೈದರಾಬಾದ್(ಡೆಸ್ಕ್): ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಪದಾರ್ಪಣೆ ಪಂದ್ಯದಲ್ಲೇ ಅದ್ಭುತ ಶತಕ ಸಿಡಿಸಿರುವ ಶ್ರೇಯಸ್ ಅಯ್ಯರ್ ಅವರಿಗೆ ಭಾರತ ಕ್ರಿಕೆಟ್ ತಂಡ ಅಭಿನಂದನೆ ಸಲ್ಲಿಸಿದೆ.
ಗಾಯದಿಂದ ಚೇತರಿಸಿಕೊಂಡ ನಂತರ ಸಿಕ್ಕ ಒಂದೊಂದೇ ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ಶ್ರೇಯಸ್ ಗುರುವಾರ ದಿಗ್ಗಜರ ಅನುಪಸ್ಥಿತಿಯಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಆಡುವ ಅವಕಾಶ ಪಡೆದಿದ್ದರು. ಟೀಮ್ ಇಂಡಿಯಾ 106 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್ಗೆ ಆಗಮಿಸಿದ ಮುಂಬೈಕರ್ 4ನೇ ವಿಕೆಟ್ಗೆ ನಾಯಕ ರಹಾನೆ(35) ಜೊತೆಗೆ 39 ರನ್ ಸೇರಿಸಿದರು.
ರಹಾನೆ ಔಟಾದ ನಂತರ ಅನುಭವಿ ಜಡೇಜಾ ಜೊತೆಗೂಡಿದ ಯುವ ಪ್ರತಿಭೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಈ ಜೋಡಿ 5ನೇ ವಿಕೆಟ್ ಜೊತೆಯಾಟದಲ್ಲಿ 113 ರನ್ ಸೇರಿಸಿ ಭಾರತವನ್ನು ಸುಸ್ಥಿತಿಗೆ ತಂದು ನಿಲ್ಲಿಸಿದರು. ಇಂದು ಆಟ ಮುಂದುವರಿಸಿದ ಶ್ರೇಯಸ್ ಅಯ್ಯರ್ ಶತಕ ಗಳಿಸುವಲ್ಲಿ ಯಶಸ್ವಿಯಾದರು. ತಮ್ಮ ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಶತಕ ಗಳಿಸಿ ಮಿಂಚಿದ್ದಾರೆ. ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ 16ನೇ ಆಟಗಾರ ಶ್ರೇಯಸ್ ಆಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್ಗೆ ಶುಭ ಕೋರಿದ್ದಾರೆ." ಕಳೆದ ಕೆಲವು ವರ್ಷಗಳಿಂದ ನಿಮ್ಮ ಕಠಿಣ ಪರಿಶ್ರಮವನ್ನು ನೋಡಿದ್ದೇನೆ. ಟೆಸ್ಟ್ ಕ್ಯಾಪ್ ಪಡೆಯಲು ನೀವು ಅರ್ಹರು. ತುಂಬಾ ಹೆಮ್ಮೆಯಾಗುತ್ತಿದೆ ಶ್ರೇಯಸ್ ಅಯ್ಯರ್'' ಎಂದು ಟ್ವೀಟ್ ಮಾಡಿದ್ದರು.
167 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್ ನೆರವಿನಿಂದ 104 ರನ್ಗಳಿಸಿ ಶ್ರೇಯಸ್ ಅಯ್ಯರ್ ಆಟ ಮುಂದುವರಿಸಿದ್ದಾರೆ. ಭಾರತ ತಂಡ 94 ಓವರ್ಗಳಿಗೆ 6 ವಿಕೆಟ್ಗಳನ್ನು ಕಳೆದುಕೊಂಡು 292 ರನ್ಗಳನ್ನು ಗಳಿಸಿ ಮುನ್ನಡೆಯುತ್ತಿದೆ.