ಆಕ್ಲೆಂಡ್:ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಗೆದ್ದಿರುವ ಭಾರತ ತಂಡಕ್ಕೆ ಇದೀಗ ಏಕದಿನ ಸರಣಿ ಗೆಲ್ಲುವ ಸವಾಲು ಎದುರಾಗಿದೆ. ಇಂದು ಆಕ್ಲೆಂಡ್ನಲ್ಲಿ ಉಭಯ ತಂಡಗಳ ನಡುವೆ ಮೊದಲ ಪಂದ್ಯ ನಡೆಯುತ್ತಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಎದುರಾಳಿ ತಂಡಕ್ಕೆ 307 ರನ್ಗಳ ಬೃಹತ್ ಗುರಿ ನೀಡಿತು.
ಭಾರತದ ಇನ್ನಿಂಗ್ಸ್ ಹೀಗಿತ್ತು..: ಆರಂಭಿಕರಾದ, ನಾಯಕ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಕಿವೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಇಬ್ಬರು ಶತಕದ ಜೊತೆಯಾಟವಾಡಿ ತಂಡದ ಮೊತ್ತವನ್ನು ನಿಧಾನಗತಿಯಲ್ಲಿ ಏರಿಸುವಲ್ಲಿ ಸಫಲರಾದರು. ಅರ್ಧಶತಕ ಪೂರೈಸಿದ ಬೆನ್ನಲ್ಲೇ ಶುಭಮನ್ ಗಿಲ್ ಔಟಾಗಿ ಪೆವಿಲಿಯನ್ ಹಾದಿ ಹಿಡಿದರು. ಇವರ ಬಳಿಕ ಶಿಖರ್ ಧವನ್ 72 ರನ್ ಗಳಿಸಿ ಔಟಾದರು.
ಆರಂಭಿಕರು ಔಟಾದ ಬಳಿಕ ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಕಣಕ್ಕಿಳಿದರು. ಪಂತ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಬಳಿಕ ಬಂದ ಸೂರ್ಯಕುಮಾರ್ ಯಾದವ್ ಸಹ ಪಂತ್ ಹಾದಿಯನ್ನೇ ಹಿಡಿದರು. ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಉತ್ತಮ ಜೊತೆಯಾಟವಾಡಿ ಪಂದ್ಯದ ಮೊತ್ತ ಹೆಚ್ಚಿಸುವಲ್ಲಿ ಯಶಸ್ಸು ಸಾಧಿಸಿದರು.
ಸಂಜು ಸ್ಯಾಮ್ಸನ್ 36 ರನ್ಗಳನ್ನು ಪೇರಿಸಿ ಪೆವಿಲಿಯನ್ ಹಾದಿ ಹಿಡಿದರು. ಇವರ ಸ್ಥಾನಕ್ಕೆ ಬಂದ ವಾಷಿಂಗ್ಟನ್ ಸುಂದರ್ ಸ್ಫೋಟಕ ಆಟ ಪ್ರದರ್ಶಿಸಿದರು. 16 ಎಸೆತಗಳಲ್ಲಿ 37 ರನ್ಗಳನ್ನು ಗಳಿಸಿ ಅಜೇಯರಾಗುಳಿದರು. ಭಾರತ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 306 ರನ್ಗಳನ್ನು ಕಲೆ ಹಾಕಿ ಎದುರಾಳಿಗೆ ಬೃಹತ್ ಗುರಿ ನೀಡಿದರು.