ಹೈದರಾಬಾದ್: ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಮುಕ್ತಾಯದ ಬಳಿಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಡಲು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಂಗ್ಲರ ನಾಡಿನಲ್ಲಿ ಉಳಿದಿದೆ. 20 ದಿನಗಳ ರಜೆಯ ನಂತರ ಟೀಂ ಇಂಡಿಯಾ ಆಟಗಾರರು ಮರಳಿ ಅಭ್ಯಾಸ ಪಂದ್ಯಕ್ಕಾಗಿ ನೆಟ್‌ನಲ್ಲಿ ಬೆವರಳಿಸಿದರು.
ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭರ್ಜರಿ ತಯಾರಿ ನಡೆಸಿದೆ. ಟೆಸ್ಟ್ ಸರಣಿಗೂ ಮೊದಲು, ಭಾರತವು ದರ್ಹಾಮ್ನಲ್ಲಿ ಕೌಂಟಿ ಚಾಂಪಿಯನ್‌ಶಿಪ್ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ಹೀಗಾಗಿ, ಭಾರತ ತಂಡವು ಇಂದಿನಿಂದ ತಮ್ಮ ಮೊದಲ ಅಭ್ಯಾಸವನ್ನು ಪ್ರಾರಂಭಿಸಿದೆ. ದರ್ಹಾಮ್‌ನ ಎಮಿರೇಟ್ಸ್ ರಿವರ್ಸೈಡ್ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಆಟಗಾರರು ಮೈದಾನದಲ್ಲಿ ಬೆವರು ಹರಿಸಿದ್ದಾರೆ.
ಟೀಂ ಇಂಡಿಯಾ ಆಟಗಾರರು ನೆಟ್ ಸೆಷನ್ನ ಫೋಟೋ ಮತ್ತು ವಿಡಿಯೋಗಳನ್ನು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ತಂಡದ ನಾಯಕ ವಿರಾಟ್ ಕೊಹ್ಲಿ , ಒಪನರ್ ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ ಹಾಗೂ ಕೆ ಎಲ್ ರಾಹುಲ್ ಕೂಡ ನೆಟ್ಸ್ನಲ್ಲಿ ಬೆವರಿಳಿಸಿದ್ದಾರೆ.
ಟೆಸ್ಟ್ ಸರಣಿಗೂ ಮೊದಲು ನಡೆಯುವ ಈ ಅಭ್ಯಾಸ ಪಂದ್ಯವು ತಂಡದ ಕೆಲವು ಆಟಗಾರರಿಗೆ ಬಹಳ ಮುಖ್ಯವಾಗಿದೆ. ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆಗೆ ಇಲ್ಲಿ ಉತ್ತಮ ಪ್ರದರ್ಶನ ನೀಡುವ ಅನಿವಾರ್ಯತೆ ಕೂಡ ಇದೆ. ಇದೇ ಕಾರಣಕ್ಕೆ ತಂಡದ ಎಲ್ಲ ಆಟಗಾರರು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಮತ್ತೊಂದೆಡೆ, ರಿಷಭ್ ಪಂತ್ಗೆ ಕೊರೊನಾ ದೃಢ ಪಟ್ಟಿದೆ. ಇತ್ತ ವೃದ್ಧಿಮಾನ್ ಸಹಾ ಅನುಪಸ್ಥಿತಿಯಲ್ಲಿ ಕೆ ಎಲ್ ರಾಹುಲ್ ಈ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿದೆ. ಅಲ್ಲದೆ, ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ, ಮತ್ತೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ತವಕದಲ್ಲಿದ್ದಾರೆ.
ಭಾರತೀಯ ಬೌಲರ್‌ಗಳು ಕೂಡ ತಮ್ಮ ಕೌಶಲ್ಯವನ್ನು ಸುಧಾರಿಸಲು ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಸರ್ರೆ ಪರ ಕೌಂಟಿ ಪಂದ್ಯ ಆಡಿದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಪಂದ್ಯದಲ್ಲಿ ಅವರು 5 ವಿಕೆಟ್ ಪಡೆದು ಮಿಂಚಿದ್ದರು. ಇನ್ನು, ಟೀಂ ಇಂಡಿಯಾದ ವೇಗಿಗಳಾದ ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಸಿರಾಜ್ ಕೂಡ ನೆಟ್‌ನಲ್ಲಿ ಬೆವರ ಹರಿಸಿದರು.