ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಉಪಯುಕ್ತ ಅರ್ಧ ಶತಕದ ನೆರವಿನೊಂದಿಗೆ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 87 ರನ್ಗಳ ಮುನ್ನಡೆ ಸಾಧಿಸಿತು. ಇಂದಿನ ಎರಡನೇ ದಿನದಾಟದಲ್ಲಿ ಭಾರತ 86 ಓವರ್ಗಳಲ್ಲಿ 314 ರನ್ಗಳಿಗೆ ಆಲೌಟ್ ಆಗಿದೆ. ದಿನದಾಂತ್ಯಕ್ಕೆ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ 6 ಓವರ್ಗಳಲ್ಲಿ 7 ರನ್ ಕಲೆ ಹಾಕಿತು.
ಢಾಕಾದ ಶೇರ್-ಎ-ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ಮೊದಲ ದಿನ ಆಟದಲ್ಲೇ ಟೀಂ ಇಂಡಿಯಾದ ಬಾಂಗ್ಲಾ ತಂಡವನ್ನು 227 ರನ್ಗಳಿಗೆ ಕಟ್ಟಿ ಹಾಕಿತ್ತು. ಇನ್ಸಿಂಗ್ ಆರಂಭಿಸಿದ್ದ ಶುಭ್ಮನ್ ಗಿಲ್ ಮತ್ತು ನಾಯಕ ಕೆ ಎಲ್ ರಾಹುಲ್ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು. ಇಂದು ತಂಡದ ಒಟ್ಟು ಮೊತ್ತ 27 ರನ್ ಆಗಿದ್ದಾಗ ರಾಹುಲ್ (10) ಔಟಾಗಿ ನಿರಾಸೆ ಮೂಡಿಸಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಗಿಲ್ (20) ಕೂಡ ಪೆವಿಲಿಯನ್ ಸೇರಿದರು.
ಇದನ್ನೂ ಓದಿ:IPL ಹರಾಜು: ಸ್ಯಾಮ್ ಕರ್ರಾನ್‌ಗೆ ₹18 ಕೋಟಿ ಕೊಟ್ಟ ಪಂಜಾಬ್! ಚೆನ್ನೈ ತಂಡಕ್ಕೆ ಬೆನ್ ಸ್ಟೋಕ್ಸ್
ಮೊದಲ ಟೆಸ್ಟ್‌ನಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದ ಚೇತೇಶ್ವರ್ ಪೂಜಾರ ಮತ್ತು ಭರವಸೆಯ ಆಟಗಾರ ವಿರಾಟ್ ಕೊಹ್ಲಿ ಅವರಿಂದಲೂ ಹೆಚ್ಚಿನ ರನ್ಗಳನ್ನು ಕಲೆ ಹಾಕಲು ಸಾಧ್ಯವಾಗಲಿಲ್ಲ. 55 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ ಪೂಜಾರ 24 ರನ್ಗಳಿಗೆ ವಿಕೆಟ್ ಒಪ್ಪಿಸಿದರು. 73 ಎಸೆತಗಳನ್ನು ಎದುರಿಸಿದ ವಿರಾಟ್ 3 ಬೌಂಡರಿಗಳೊಂದಿಗೆ ಕೇವಲ 24 ರನ್ಗಳನ್ನಷ್ಟೇ ಬಾರಿಸಲು ಶಕ್ತವಾದರು. ಪರಿಣಾಮ ತಂಡದ ಮೊತ್ತ 94 ರನ್ಗಳಾಗುವಷ್ಟರಲ್ಲೇ ಟೀಂ ಇಂಡಿಯಾ ಪ್ರಮುಖ 4 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಪಂತ್-ಅಯ್ಯರ್ ಅರ್ಧ ಶತಕ:ಈ ನಡುವೆ ಜೊತೆಯಾದ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟ್ ಬೀಸಿ ತಂಡಕ್ಕೆ ಆಸರೆಯಾದರು. ಈ ಜೋಡಿ ಐದನೇ ವಿಕೆಟ್ಗೆ 188 ಎಸತೆಗಳಲ್ಲಿ 159 ರನ್ಗಳ ಜೊತೆಯಾಟ ನೀಡಿ, ತಂಡವನ್ನು ಅಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿತು.