ಚಿತ್ತಗಾಂಗ್(ಬಾಂಗ್ಲಾದೇಶ): ಮೊದಲ ಟೆಸ್ಟ್ ಗೆಲ್ಲಲು ಬಾಂಗ್ಲಾದೇಶಕ್ಕೆ ಭಾರತ 513 ರನ್ಗಳ ಬೃಹತ್ ಗುರಿ ನೀಡಿದೆ. ಶುಭಮನ್ ಗಿಲ್ ಅವರ ಚೊಚ್ಚಲ ಶತಕ ಮತ್ತು ಚೇತೇಶ್ವರ ಪೂಜಾರ ಆಕರ್ಷಕ ಶತಕದೊಂದಿಗೆ ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ಅನ್ನು 2 ವಿಕೆಟ್ ನಷ್ಟಕ್ಕೆ 258 ರನ್ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಇಂದು ಮೂರನೇ ದಿನದಾಟ ಅಂತ್ಯಕ್ಕೆ ಬಾಂಗ್ಲಾ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ವಿಕೆಟ್ ನಷ್ಟವಿಲ್ಲದೇ 42 ರನ್ ಗಳಿಸಿದ್ದು, ಗೆಲುವಿಗೆ 417 ರನ್‌ಗಳು ಬೇಕು.
ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 404 ರನ್‌ಗಳನ್ನು ಪೇರಿಸಿತ್ತು. ಬಾಂಗ್ಲಾ ಆಟಗಾರರು ಇಂದು ಮೂರನೇ ದಿನದಾಟದಲ್ಲಿ ಕೇವಲ 150 ರನ್ಗಳಿಗೆ ಸರ್ವಪತನ ಕಂಡು ಮೊದಲ ಇನ್ನಿಂಗ್ಸ್ ಮುಗಿಸಿದರು. ಇದರಿಂದ ತಂಡ ಮೊದಲ ಇನ್ನಿಂಗ್ಸ್ನಲ್ಲಿ 254 ರನ್ಗಳ ಹಿನ್ನಡೆ ಅನುಭವಿಸಿತ್ತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಬಿರುಸಿನ ಬ್ಯಾಟಿಂಗ್‌ಗೆ ಮುಂದಾಯಿತು.
ಶುಭಮನ್ ಗಿಲ್ ಚೊಚ್ಚಲ ಶತಕ: ಆರಂಭಿಕರಾದ ನಾಯಕ ಕೆ ಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್‌ಗೆ 70 ರನ್‌ಗಳನ್ನು ಕಲೆ ಹಾಕಿ ಉತ್ತಮ ಅಡಿಪಾಯ ಹಾಕಿದರು. 3 ಬೌಂಡರಿಗಳೊಂದಿಗೆ 23 ರನ್‌ಗಳನ್ನು ಬಾರಿಸಿದ್ದ ರಾಹುಲ್, ಖಲೀದ್ ಅಹಮದ್ ಬೌಲಿಂಗ್ನಲ್ಲಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಬಂದ ಚೇತೇಶ್ವರ ಪೂಜಾರ ಮತ್ತು ಶುಭಮನ್ ಗಿಲ್ ಆಕರ್ಷಕ ಆಟವಾಡಿ 113 ರನ್ಗಳ ಜೊತೆಯಾಟ ನೀಡಿದರು.
ಇದನ್ನೂ ಓದಿ:'ಇದು ಟಿ20 ಅಲ್ಲ, ಟೆಸ್ಟ್ ಕ್ರಿಕೆಟ್': ಲಿಟ್ಟನ್ಗೆ ಬ್ಯಾಟಿಂಗ್ ಸಲಹೆ ನೀಡಿದ್ದೆ ಎಂದ ಸಿರಾಜ್
ಗಿಲ್ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ಸೆಂಚುರಿ ಬಾರಿಸಿ ಮಿಂಚಿದರು. 10 ಬೌಂಡರಿ ಮತ್ತು 3 ಸಿಕ್ಸರ್ಗಳೊಂದಿಗೆ 152 ಎಸೆತಗಳಲ್ಲಿ 110 ರನ್ ಬಾರಿಸಿದ ಗಿಲ್, ಮೆಹಿದಿ ಹಸನ್ ಮಿರಾಜ್ ಬೌಲಿಂಗ್ನಲ್ಲಿ ಔಟಾದರು. ಮೊದಲ ಇನ್ನಿಂಗ್ಸ್ನಲ್ಲಿ ಅವರು 20 ರನ್ ಬಾರಿಸಿದ್ದರು.
ಪೂಜಾರ ವೇಗದ ಶತಕ: ಮೊದಲ ಇನ್ನಿಂಗ್ಸ್ನಲ್ಲಿ 90 ರನ್ ಬಾರಿಸಿ ಶತಕದಂಚಿನಲ್ಲಿ ಎಡವಿದ್ದ ಚೇತೇಶ್ವರ ಪೂಜಾರ ಎರಡನೇ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿ ಗಮನ ಸೆಳೆದರು. 13 ಬೌಂಡರಿಗಳೊಂದಿಗೆ 130 ಎಸೆತಗಳಲ್ಲಿ ಪೂಜಾರ 102* ರನ್ ಕಲೆ ಹಾಕಿದರು. ಇದು ಪೂಜಾರ ಅವರ ವೇಗದ ಶತಕವಾಗಿದ್ದು, 52 ಇನ್ನಿಂಗ್ಸ್ನಲ್ಲಿ ಮೂಡಿ ಬಂದ ಮೊದಲ ಸೆಂಚುರಿಯೂ ಆಗಿದೆ.
ಪೂಜಾರ ಶತಕ ಪೂರೈಸುತ್ತಿದ್ದಂತೆ ನಾಯಕ ಕೆ ಎಲ್ ರಾಹುಲ್ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು. ಇತ್ತ, ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದಿದ್ದ ವಿರಾಟ್ ಕೊಹ್ಲಿ 29 ಎಸೆತಗಳಲ್ಲಿ ಅಜೇಯ 19 ರನ್ ಬಾರಿಸಿದರು. ಒಟ್ಟಾರೆ ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ಮೂಲಕ 61.4 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 258 ರನ್‌ಗಳನ್ನು ಪೇರಿಸಿತ್ತು. ಬಾಂಗ್ಲಾ ಪರವಾಗಿ ಖಲೀದ್ ಅಹಮದ್ ಮತ್ತು ಮೆಹಿದಿ ಹಸನ್ ಮಿರಾಜ್ ತಲಾ 1 ವಿಕೆಟ್ ಪಡೆದರು.
ಬಾಂಗ್ಲಾ ಇನ್ನಿಂಗ್ಸ್:ಭಾರತದ ಎರಡನೇ ಇನ್ನಿಂಗ್ಸ್ನ 258 ರನ್‌ಗಳು ಮತ್ತು ತನ್ನ ಮೊದಲ ಇನ್ನಿಂಗ್ಸ್ 254 ರನ್ಗಳ ಹಿನ್ನೆಡೆಯಿಂದ ಬಾಂಗ್ಲಾ ಗೆಲುವಿಗೆ ಒಟ್ಟಾರೆ 513 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ. ಇಂದು ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಬಾಂಗ್ಲಾ ಆಟಗಾರರು ದಿನದಾಟ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 42 ರನ್ ಗಳಿಸಿದ್ದಾರೆ. ಆರಂಭಿಕರಾದ ನಜ್ಮುಲ್ ಹೊಸೈನ್ ಶಾಂತೋ 25* ಮತ್ತು ಜಾಕೀರ್ ಹಸನ್ 17* ರನ್ಗಳೊಂದಿಗೆ ನಾಲ್ಕನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ:ಚಿತ್ತಗಾಂಗ್ ಟೆಸ್ಟ್: ಐದು ವಿಕೆಟ್ ಕಬಳಿಸಿದ ಕುಲದೀಪ್.. 150 ರನ್ಗಳಿಗೆ ಬಾಂಗ್ಲಾ ಆಲೌಟ್