ಮುಂಬೈ:ಇಂಗ್ಲೆಂಡ್ ವನಿತೆಯರ ವಿರುದ್ಧದ ಟೆಸ್ಟ್ನಲ್ಲಿ 347 ರನ್ಗಳ ದಾಖಲೆಯ ಜಯ ಗಳಿಸಿದ್ದ, ಭಾರತದ ವನಿತೆಯರು ಆಸ್ಟ್ರೇಲಿಯಾ ವಿರುದ್ಧವೂ ಅದೇ ಲಯ ಮುಂದುವರಿಸಿ ಏಕೈಕ ಟೆಸ್ಟ್ ಸರಣಿಯಲ್ಲಿ 8 ವಿಕೆಟ್ಗಳಿಂದ ಜಯಭೇರಿ ಬಾರಿಸಿತು. ಬ್ಯಾಟಿಂಗ್, ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತದ ವನಿತೆಯರು ಕಾಂಗರೂ ಪಡೆಯನ್ನು ನಾಲ್ಕೇ ದಿನದಲ್ಲಿ ಹೊಸಕಿ ಹಾಕಿ, ಮೊದಲ ಜಯ ದಾಖಲಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡರು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಪೂಜಾ ವಸ್ತ್ರಕಾರ್ ಮತ್ತು ಸ್ನೇಹ ರಾಣಾ ದಾಳಿಗೆ ಸಿಲುಕಿದ ಅಲಿಸ್ಸಾ ಹೀಲಿ ನೇತೃತ್ವದ ತಂಡ 219 ರನ್ಗೆ ಆಲೌಟ್ ಆಗಿತ್ತು. ದಿಟ್ಟ ಪ್ರದರ್ಶನ ನೀಡಿದ ಭಾರತ 406 ರನ್ ಗಳಿಸಿ 187 ರನ್ಗಳ ಮುನ್ನಡೆ ಸಾಧಿಸಿತು. ಎರಡನೇ ಇನಿಂಗ್ಸ್ನಲ್ಲಿ ಆಸೀಸ್ ಮತ್ತೆ ವೈಫಲ್ಯ ಅನುಭವಿಸಿ 261 ರನ್ ಗಳಿಸಿ, 74 ರನ್ಗಳ ಗುರಿ ನೀಡಿತು. ಅತ್ಯಲ್ಪ ಗುರಿಯನ್ನು ಮುಟ್ಟಿದ ಭಾರತದ ವನಿತೆಯರು ಜಯದ ಸಿಹಿ ಅನುಭವಿಸಿದರು.
ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸತತ ಸೋಲು ಕಂಡಿದ್ದ ಭಾರತ ಗೆಲ್ಲುವ ಛಲದೊಂದಿಗೆ ಕಣಕ್ಕಿಳಿಯಿತು. ಇದನ್ನು ಮೊದಲ ಇನಿಂಗ್ಸ್ನಲ್ಲೇ ತಂಡ ತೋರಿಸಿಕೊಟ್ಟಿತು. ಬೌಲಿಂಗ್ ಅಸ್ತ್ರಗಳಾದ ಪೂಜಾ ವಸ್ತ್ರಕಾರ್ 4, ಸ್ನೇಹ ರಾಣಾ 3, ದೀಪ್ತಿ ಶರ್ಮಾ 2 ವಿಕೆಟ್ ಪಡೆದು ಮಾರಕ ದಾಳಿ ನಡೆಸಿದರು. ಇದರಿಂದ ಅಲಿಸ್ಸಾ ಹೀಲಿ ಪಡೆ 219 ರನ್ಗೆ ಆಲೌಟ್ ಆಯಿತು. ಭಾರತದ ಪರವಾಗಿ ಸ್ಮೃತಿ ಮಂಧಾನ, ರಿಚಾ ಘೋಷ್, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ ಅರ್ಧಶತಕ ಬಾರಿಸುವ ಮೂಲಕ 409 ರನ್ಗಳ ಬೃಹತ್ ಮೊತ್ತ ಪೇರಿಸಿದರು. ಜೊತೆಗೆ 187 ರನ್ಗಳ ಮುನ್ನಡೆ ಸಾಧಿಸಿದರು.