ಹೈದರಾಬಾದ್ ಡೆಸ್ಕ್:ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮೂರನೇ ಮತ್ತು ಅಂತಿಮ ಟಿ20 ಪಂದ್ಯ ಸರಣಿ ಗೆಲುವಿಗೆ ನಿರ್ಣಾಯವಾಗಿದ್ದು, ಉಭಯ ತಂಡಗಳ ನಡುವಿನ ರೋಚಕ ಸೆಣಸಾಟಕ್ಕೆ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನ ಸಾಕ್ಷಿಯಾಗಲಿದೆ.
ಮೂರು ಪಂದ್ಯಗಳ ಸರಣಿಯಲ್ಲಿ ತಲಾ ಒಂದು ಪಂದ್ಯ ಗೆದ್ದಿರುವ ಉಭಯ ತಂಡಗಳು 1-1 ರಲ್ಲಿ ಸಮಬಲ ಸಾಧಿಸಿವೆ. ಇಂದು ನಡೆಯುವ ಕೊನೆಯ ಪಂದ್ಯವನ್ನು ಗೆಲ್ಲುವ ತಂಡ ಸರಣಿ ಜಯಿಸಲಿದೆ. ಹೀಗಾಗಿ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದಾಗಿದೆ.
ಕಮಾಲ್ ಮಾಡ್ತಾರಾ ಹರ್ಷಲ್, ಚಹಲ್:ಬ್ಯಾಟಿಂಗ್ ವಿಭಾಗದ ಭಾರತ ತಂಡದ ಬಲ. ಇದು ಕಳೆದ ಪಂದ್ಯದಲ್ಲೂ ಸಾಬೀತಾಗಿತ್ತು. ಬೌಲಿಂಗ್ ವಿಭಾಗ ಮೊನಚು ಕಳೆದುಕೊಂಡಿದ್ದು, ಏಷ್ಯಾಕಪ್ ಸೋಲಿಗೂ ಕಾರಣವಾಗಿತ್ತು. ಇದಲ್ಲದೇ, ಆಸೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ 208 ರನ್ ಗಳಿಸಿದಾಗ್ಯೂ ತಂಡ ಬೌಲರ್ಗಳ ವೈಫಲ್ಯದಿಂದ ಸೋಲು ಕಂಡಿತ್ತು.
ಮುಂಚೂಣಿ ವೇಗಿಗಳಾದ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಸ್ಪಿನ್ನರ್ ಯಜುವೇಂದ್ರ ಚಹಲ್ ವಿಕೆಟ್ ಪಡೆಯಲು ತಿಣುಕಾಡುತ್ತಿರುವುದು ತಂಡಕ್ಕೆ ತಲೆ ನೋವಾಗಿದೆ. ಭರಪೂರ ರನ್ ಬಿಟ್ಟುಕೊಟ್ಟು ಸೋಲಿಗೂ ಕಾರಣವಾಗುತ್ತಿದ್ದಾರೆ. ಮೊದಲ ಟಿ20ಯಲ್ಲಿ ಭುವನೇಶ್ವರ್, ಹರ್ಷಲ್, ಚಹಲ್ ಸೇರಿ 150 ರನ್ ಚಚ್ಚಿಸಿಕೊಂಡು ಪಂದ್ಯದ ಮುಕ್ಕಾಲು ರನ್ ಇವರಿಂದಲೇ ಪೋಲಾಗಿತ್ತು.
ಬಲ ನೀಡಿದ ಬೂಮ್ರಾ ಕಮ್ಬ್ಯಾಕ್:ಇನ್ನು 2ನೇ ಪಂದ್ಯದಲ್ಲಿ ಕಣಕ್ಕಿಳಿದ ಬೂಮ್ರಾ ಯಾರ್ಕರ್ ಮೂಲಕ ಆಸೀಸ್ ಬ್ಯಾಟರ್ಗಳ ದಿಕ್ಕು ತಪ್ಪಿಸಿದ್ದರು. ಗಾಯಗೊಂಡು ಕಮ್ಬ್ಯಾಕ್ ಆಗಿರುವ ಬೂಮ್ರಾ ಬೌಲಿಂಗ್ ಚಿಂತೆಯನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ ಎನ್ನಬಹುದು.