ನಾಗ್ಪುರ (ಮಹಾರಾಷ್ಟ್ರ) :ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ನ ಎರಡನೇ ದಿನದಾಟದಲ್ಲಿ ರವೀಂದ್ರ ಜಡೇಜಾ ಅರ್ಧಶತಕ ಬಾರಿಸುವ ಮೂಲಕ 1983 ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರ ದಾಖಲೆಯನ್ನು ಪುಡಿಗಟ್ಟಿದರು. ಟೆಸ್ಟ್ನಲ್ಲಿ ಐದು ಬಾರಿ 5 ವಿಕೆಟ್ ಗೊಂಚಲು ಮತ್ತು ಅರ್ಧಶತಕ ಸಿಡಿಸಿದ ಭಾರತದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಕಪಿಲ್ದೇವ್ 4 ಬಾರಿ ಈ ಸಾಧನೆ ಮಾಡಿದ್ದರು.
ಗಾಯದಿಂದ ಚೇತರಿಸಿಕೊಂಡು ಟೆಸ್ಟ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರವೀಂದ್ರ ಜಡೇಜಾ ಸ್ಪಿನ್ ಅಸ್ತ್ರದಿಂದ ಆಸೀಸ್ನ ಐವರು ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟಿದ್ದರು. ಬೌಲಿಂಗ್ನಲ್ಲಿ ಮಿಂಚಿದ್ದ ಜಡೇಜಾ ಬ್ಯಾಟಿಂಗ್ನಲ್ಲೂ ಕರಾಮತ್ತು ತೋರಿಸಿ ಅರ್ಧಶತಕ ಗಳಿಸಿದ್ದಾರೆ. ಜಡೇಜಾ ಮೊದಲ ದಿನದಾಟದಲ್ಲಿ 47 ರನ್ ನೀಡಿ 5 ವಿಕೆಟ್‌ಗಳನ್ನು ಪಡೆದಿದ್ದರೆ, ಎರಡನೇ ದಿನದಂದು 156 ಎಸೆತಗಳಲ್ಲಿ ಅರ್ಧಶತಕ(60) ಗಳಿಸಿ ಆಸ್ಟ್ರೇಲಿಯಾವನ್ನು ಕಾಡಿದರು.
ಈ ಮೂಲಕ ಭಾರತದ ಮಾಜಿ ಆಲ್ರೌಂಡರ್ ಕ್ರಿಕೆಟಿಗ ಕಪಿಲ್ ದೇವ್ ಹೆಸರಲ್ಲಿದ್ದ ದಾಖಲೆ ಮುರಿದರು. ಕಪಿಲ್ 4 ಬಾರಿ ಪಂದ್ಯವೊಂದರಲ್ಲಿ 5 ವಿಕೆಟ್ ಮತ್ತು ಅರ್ಧಶತಕ ಗಳಿಸಿದ್ದರು. ಇದನ್ನು ಮೀರಿದ ಜಡೇಜಾ 5 ಬಾರಿ ಈ ಸಾಧನೆ ಮಾಡಿದ ಏಕೈಕ ಭಾರತೀಯ ಎಂಬ ಅಭಿದಾನಕ್ಕೆ ಪಾತ್ರರಾದರು.
ಆಸೀಸ್ ಬ್ಯಾಟರ್ಗಳ ಕಾಡಿದ್ದ ಜಡೇಜಾ:ಟೆಸ್ಟ್ನ ಮೊದಲ ದಿನದಲ್ಲಿ ಮೊದಲು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾಕ್ಕೆ ಆರಂಭದಲ್ಲೇ ಭಾರತದ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ ಅವರನ್ನು ಬೇಗನೆ ಔಟ್ ಮಾಡಿದರು. ಬಳಿಕ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಬುಶೇನ್ 82 ರನ್‌ಗಳ ಜೊತೆಯಾಟದೊಂದಿಗೆ ತಂಡಕ್ಕೆ ನೆರವಾದರು. ದೊಡ್ಡ ಇನಿಂಗ್ಸ್ ಕಟ್ಟು ಮುನ್ಸೂಚನೆ ನೀಡಿದ್ದ ಜೋಡಿಯನ್ನು ಬೇರ್ಪಡಿಸಲು ನಾಯಕ ರೋಹಿತ್ ಜಡೇಜಾಗೆ ಬೌಲ್ ನೀಡಿದರು. ನಂಬಿಕೆ ಹುಸಿ ಮಾಡದ ಜಡ್ಡು ಅರ್ಧಶತಕದ (49) ಅಂಚಿನಲ್ಲಿದ್ದ ಲಬುಶೇನ್ರನ್ನು ಔಟ್ ಮಾಡಿದರು. ನಂತರದ ಎಸೆತದಲ್ಲೇ ಮ್ಯಾಟ್ ರೆನ್‌ಶಾ ವಿಕೆಟ್ ಕಿತ್ತು ಡಬಲ್ ಸ್ಟ್ರೋಕ್ ನೀಡಿದರು.
ಇದಾದ ಬಳಿಕ ಸ್ಟೀವ್ ಸ್ಮಿತ್ (37), ಟಾಡ್ ಮರ್ಫಿ (0), ಪೀಟರ್ ಹ್ಯಾಂಡ್ಸ್ಕಾಂಬ್ (31) ವಿಕೆಟ್ ಕಿತ್ತರು. ಸ್ಪಿನ್ ಅಸ್ತ್ರಕ್ಕೆ ನಲುಗಿದ ಆಸ್ಟ್ರೇಲಿಯಾ 177 ರನ್ಗೆ ಗಂಟುಮೂಟೆ ಕಟ್ಟಿತ್ತು. ಇನಿಂಗ್ಸ್ ಆರಂಭಿಸಿರುವ ಭಾರತ ಸದ್ಯಕ್ಕೆ 7 ವಿಕೆಟ್ ಕಳೆದುಕೊಂಡು 297 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ 120 ರನ್ ಗಳಿಸಿ ಭರ್ಜರಿ ಶತಕ ಸಾಧನೆ ಮಾಡಿದರೆ, ಉಳಿದ ಆಟಗಾರರು ಟಾಡ್ ಮೊರ್ಪಿ ಸ್ಪಿನ್ ದಾಳಿಗೆ ನಲುಗಿ ಪೆವಿಲಿಯನ್ ಪರೇಡ್ ಮಾಡಿದರು.
ಭರ್ಜರಿ ಕಮ್‌ಬ್ಯಾಕ್:ಕಳೆದ ವರ್ಷ ಏಷ್ಯಾ ಕಪ್‌ನಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ರವೀಂದ್ರ ಜಡೇಜಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದಾಗಿ ಅವರು ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಸೇರಿ ಕೆಲ ಸರಣಿಗಳನ್ನು ತಪ್ಪಿಸಿಕೊಂಡಿದ್ದರು. ಐದು ತಿಂಗಳ ಬಳಿಕ ಮತ್ತೆ ಸಕ್ರಿಯ ಕ್ರಿಕೆಟ್ಗೆ ಮರಳುವ ಮುನ್ನ ಫಿಟ್‌ನೆಸ್ ಪರೀಕ್ಷೆಗಾಗಿ ರಣಜಿ ಟ್ರೋಫಿಯಲ್ಲಿ ತಮಿಳುನಾಡು ವಿರುದ್ಧದ ಸೌರಾಷ್ಟ್ರ ಪರವಾಗಿ ಕಣಕ್ಕಿಳಿದಿದ್ದರು. ಭರ್ಜರಿ ಪ್ರದರ್ಶನ ನೀಡಿದ್ದ ಜಡ್ಡು ತಮಿಳುನಾಡಿನ ಎರಡನೇ ಇನ್ನಿಂಗ್ಸ್‌ನಲ್ಲಿ 53 ರನ್ ನೀಡಿ 7 ವಿಕೆಟ್‌ಗಳನ್ನು ಪಡೆದಿದ್ದರು.
ಇದನ್ನೂ ಓದಿ:IND vs AUS 1st Test: ರೋಹಿತ್ ಶರ್ಮಾ ಶತಕ, ಭಾರತ 7 ವಿಕೆಟ್ಗೆ 242 ರನ್