ಮೊಹಾಲಿ, ಪಂಜಾಬ್: ಭಾರತದ ಬೌಲರ್ಗಳ ದಯನೀಯ ಪ್ರದರ್ಶನ ಮುಂದುವರಿದಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 208 ರನ್ಗಳ ಬೃಹತ್ ಮೊತ್ತವನ್ನು ಉಳಿಸಿಕೊಳ್ಳದೇ ಭಾರತ ಸೋಲುಂಡಿದೆ. 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದ ಹಿನ್ನಡೆ ಅನುಭವಿಸಿತು.
ಮುಂಬರುವ ವಿಶ್ವಕಪ್ಗೆ ಸಿದ್ಧತೆಯ ಭಾಗವಾಗಿ ನಡೆಯುತ್ತಿರುವ ಈ ಸರಣಿಯಲ್ಲಿ ಬೌಲರ್ಗಳು ಅಕ್ಷರಶಃ ದಂಡನೆಗೆ ಒಳಗಾದರು. ಭಾರತದ ಬೌಲರ್ಗಳ ಮೇಲೆ ಸವಾರಿ ಮಾಡಿದ ಆಸ್ಟ್ರೇಲಿಯಾ ದಾಂಡಿಗರು 19.2 ಓವರ್ನಲ್ಲಿ 211/6 ರನ್ ಬಾರಿಸಿ ಭಾರತದ ಗುರಿಯನ್ನು ದಾಟಿದರು.
ಕ್ಯಾಮರನ್ ಗ್ರೀನ್ ಹೋರಾಟ:ಬೃಹತ್ ಮೊತ್ತವನ್ನು ಚೇಸ್ ಮಾಡಲೇಬೇಕು ಎಂಬಂತೆ ಜಿದ್ದಿಗೆ ಬಿದ್ದಿವರಂತೆ ಆಡಿದ ಆಸೀಸ್ ದಾಂಡಿಗರು ಭಾರತದ ಬೌಲರ್ಗಳ ಬೆವರಿಳಿಸಿದರು. ಆರಂಭಿಕ ಆಟಗಾರ ಕ್ಯಾಮರನ್ ಗ್ರೀನ್ ಅಬ್ಬರದ 61 ಗಳಿಸಿದರು. ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಔಟಾಗದೇ 45, ಆ್ಯರೋನ್ ಫಿಂಚ್ 22, ಸ್ಟೀವನ್ ಸ್ಮಿತ್ 35, ಟಿಮ್ ಡೇವಿಡ್ 18 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಭುವಿ, ಹರ್ಷಲ್, ಚಹಲ್ ದುಬಾರಿ: ವಿಶ್ವಕಪ್ನಲ್ಲಿ ತಂಡದಲ್ಲಿ ಸ್ಥಾನ ಪಡೆದಿರುವ ಮುಂಚೂಣಿ ವೇಗಿಗಳಾದ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಸ್ಪಿನ್ನರ್ ಯಜುವೇಂದ್ರ ಚಹಲ್ ಕ್ರಮವಾಗಿ 52, 49, 42 ರನ್ ಚಚ್ಚಿಸಿಕೊಂಡು ದುಬಾರಿಯಾದರು. ಭಾರತದ ಪರವಾಗಿ ಅಕ್ಸರ್ ಪಟೇಲ್ 3 ವಿಕೆಟ್ ಪಡೆದು ಯಶಸ್ವಿಯಾದರೆ, ಉಮೇಶ್ ಯಾದವ್ 2, ಚಹಲ್ 1 ವಿಕೆಟ್ ಪಡೆದರು.
ಭಾರತದ ಇನಿಂಗ್ಸ್:ಈ ಮೊದಲು ಬ್ಯಾಟ್ ಮಾಡಿದ್ದ ಭಾರತ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 208 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು.
ಆರಂಭದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ವಿಕೆಟ್ ಬೇಗನೇ ಕಳೆದುಕೊಂಡರೂ ಧೃತಿಗೆಡದ ರಾಹುಲ್, ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟ್ ಬೀಸಿದರು. ಸ್ಟ್ರೈಕ್ರೇಟ್ ಕಾರಣಕ್ಕಾಗಿ ಟೀಕೆಗೆ ಗುರಿಯಾಗಿರುವ ಕನ್ನಡಿಗ ಕೆ ಎಲ್ ರಾಹುಲ್ ಕೇವಲ 35 ಎಸೆತಗಳಲ್ಲಿ 55 ರನ್ ಬಾರಿಸಿದರು. ಇದರಲ್ಲಿ 3 ಸಿಕ್ಸರ್, 4 ಬೌಂಡರಿಗಳಿದ್ದವು. ಈ ಮೂಲಕ ರಾಹುಲ್ ಟೀಕಾಕಾರಿಗೆ ಬ್ಯಾಟ್ ಎತ್ತುವ ಮೂಲಕವೇ ಉತ್ತರ ನೀಡಿದರು. ಕೊನೆಗೆ ದೊಡ್ಡ ಹೊಡೆತಕ್ಕೆ ಮುಂದಾಗಿ ಹೇಜಲ್ವುಡ್ಗೆ ವಿಕೆಟ್ ಒಪ್ಪಿಸಿದರು.
ಇನ್ನು ಏಷ್ಯಾಕಪ್ನಲ್ಲಿ ಮಿಂಚು ಹರಿಸಲು ವಿಫಲವಾಗಿದ್ದ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯನ್ನರ ವಿರುದ್ಧ ಸವಾರಿ ಮಾಡಿದರು. 4 ಸಿಕ್ಸರ್, 2 ಬೌಂಡರಿ ಸಮೇತ 46 ರನ್ ಗಳಿಸಿ ಔಟಾಗಿ ಅರ್ಧಶತಕದಿಂದ ತಪ್ಪಿಸಿಕೊಂಡರು.
ಹಾರ್ದಿಕ್ ಪಾಂಡ್ಯಾ ವೀರಾವೇಶ:ಭರ್ಜರಿ ಫಾರ್ಮ್ನಲ್ಲಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಆಸೀಸ್ ಬೌಲರ್ಗಳ ಬೆವರಿಳಿಸಿದರು. ಕೊನೆಯವರೆಗೂ ಔಟಾಗದೇ ಉಳಿದ ಹಾರ್ದಿಕ್ 71 ರನ್ ಗಳಿಸಿದರು. ಇದರಲ್ಲಿ 5 ಸಿಕ್ಸರ್, 7 ಬೌಂಡರಿಗಳಿದ್ದವು. ಬಳಸಿದ್ದು 30 ಎಸೆತ ಮಾತ್ರ. ಸಿಕ್ಸ್, ಫೋರ್ಗಳಿಂದಲೇ ಪಾಂಡ್ಯಾ 58 ರನ್ ಗಳಿಸಿದ್ದು ಅಬ್ಬರಕ್ಕೆ ಸಾಕ್ಷಿಯಾಗಿತ್ತು. ಆಸ್ಟ್ರೇಲಿಯಾ ಪರವಾಗಿ ಜೋಸ್ ಹೇಜಲ್ವುಡ್ 2, ನಾಥನ್ ಎಲ್ಲಿಸ್ 3, ಕ್ಯಾಮರನ್ ಗ್ರೀನ್ 1 ವಿಕೆಟ್ ಗಳಿಸಿದರು.
ಓದಿ:ಮಹಿಳಾ ಕಬಡ್ಡಿ ಪ್ಲೇಯರ್ಸ್ಗೆ ಶೌಚಾಲಯದಲ್ಲಿ ಊಟದ ವ್ಯವಸ್ಥೆ: ಕ್ರೀಡಾಧಿಕಾರಿ ಅಮಾನತು