ನವದೆಹಲಿ: ಜನವರಿ 11ರಿಂದ ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿ ಆರಂಭಗೊಳ್ಳಲಿದ್ದು, ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಈ ಬಗ್ಗೆ ಇನ್ನೂ ಯಾವುದೂ ಖಾತ್ರಿಯಾದಂತೆ ಕಾಣಿಸುತ್ತಿಲ್ಲ. ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ಈ ಮೂವರು ಸ್ಟಾರ್ ಬ್ಯಾಟ್ಸಮನ್ಗಳಲ್ಲಿ ಯಾರು ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದಾರೆ ಎಂಬುದರ ಬಗ್ಗೆ ಬಿಸಿಸಿಐನಿಂದ ಖಚಿತತೆ ಹೊರ ಬೀಳಬೇಕಿದೆ. ಆದರೆ, ಈ ಮೂವರಲ್ಲಿ ಯಾರಾದರೊಬ್ಬರು ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದರೆ ಮತ್ತೊಬ್ಬರು ಬೆಂಚ್ ಕಾಯಬೇಕಾದ ಅನಿವಾರ್ಯತೆ ಬರಬಹುದು ಅನ್ನೋದು ಕ್ರಿಕೆಟ್ ವಿಶ್ಲೇಷಕರ ಮಾತು.
ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಗೆ ಬಿಸಿಸಿಐ ಈಗಾಗಾಲೇ ಭಾರತ ತಂಡವನ್ನು ಪ್ರಕಟಿಸಿದೆ. ಸುಮಾರು 14 ತಿಂಗಳ ನಂತರ ಸ್ಟಾರ್ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ-20 ತಂಡಕ್ಕೆ ಮರಳಿದ್ದಾರೆ. ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ (ಗಾಯದ ಕಾರಣ), ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ರವೀಂದ್ರ ಜಡೇಜಾ ಅವರನ್ನು ತಂಡದಿಂದ ಹೊರಗೊಳಿಯಲಿದ್ದು, ಯುವ ಆಲ್ ರೌಂಡರ್ಗಳಾದ ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದಾರೆ. ಬಲಿಷ್ಠ ಆಟಗಾರರೊಂದಿಗೆ ಕಣಕ್ಕಿಳಿಯಲಿರುವ ತಂಡ, ರೋಹಿತ್ ಜೊತೆಗಾರನ ಹುಡುಕಾಟದಲ್ಲಿ ಮುಳುಗಿದೆ.
ರೋಹಿತ್ - ಜೈಸ್ವಾಲ್:ನಿರಂತರವಾಗಿಮೊದಲ ಕ್ರಮಾಂಕದಲ್ಲಿ ಆಡುತ್ತಾ ಬಂದಿರುವ ರೋಹಿತ್, ಈ ಸರಣಿಯಲ್ಲಿಯೂ ಅದೇ ಮಾರ್ಗ ಅನುಸರಿಸಬಹುದು. ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸುವ ರೋಹಿತ್ಗೆ ಉತ್ತಮ ಜೊತೆಗಾರನ ಅವಶ್ಯಕತೆ ಇದೆ. ಎಡಗೈ ಅಥವಾ ಬಲಗೈ ಬ್ಯಾಟ್ಸ್‌ಮನ್‌ಗಳೊಂದಿಗೆ ಇನ್ನಿಂಗ್ಸ್ ಪ್ರಾರಂಭಿಸುವ ಆಲೋಚನೆಯಲ್ಲಿರುವ ಕೋಚ್ ರಾಹುಲ್ ದ್ರಾವಿಡ್, ಯಶಸ್ವಿ ಜೈಸ್ವಾಲ್ಗೆ ಅವಕಾಶ ಮಾಡಿಕೊಡಬಹುದು. ಆದರೆ, ಇದು ಕೈಗೂಡುತ್ತಾ ಕಾದುನೋಡಬೇಕು ಎನ್ನುತ್ತಿದ್ದಾರೆ ವಿಶ್ಲೇಷಕರು.
ರೋಹಿತ್-ಗಿಲ್: ಇನ್ನೊಂದು ತುದಿಯಲ್ಲಿ ಈ ಸರಣಿಯಲ್ಲಿ ರೋಹಿತ್ ಶರ್ಮಾ ಜೊತೆ ಶುಭ್ಮನ್ ಗಿಲ್ ಇನ್ನಿಂಗ್ಸ್ ತೆರೆಯುವ ಸಾಧ್ಯತೆಯೂ ಇದೆ. ಗಿಲ್ ಇನ್ನಿಂಗ್ಸ್ ಆರಂಭಿಕರಾಗಿ ನಿರಂತರವಾಗಿ ಕಣಕ್ಕಿಳಿದವರು. ತಾಳ್ಮೆ ಮತ್ತು ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಆಡುವ ಗಿಲ್, ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಬಹುದು ಅನ್ನೋದು. ಆದರೆ, ರೋಹಿತ್ ಜೊತೆಗೆ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದರೆ ಗಿಲ್ 3ನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ಗಿಲ್ 3 ರಲ್ಲಿ ಆಡಿದರೆ, ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿಯಬೇಕಾಗುತ್ತದೆ. ಆದರೆ, ಈವರೆಗಿನ ಚುಟುಕು ಸರಣಿಯಲ್ಲಿ ಕೊಹ್ಲಿ 4ನೇ ಸ್ಥಾನದಲ್ಲಿ ಬ್ಯಾಟ್ ಮಾಡಿರುವ ಉದಾಹರಣೆ ಇಲ್ಲ. ಹಾಗಾಗಿ, ಗಿಲ್ ಅಥವಾ ಜೈಸ್ವಾಲ್ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಪ್ಲೇಯಿಂಗ್ 11ರಲ್ಲಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚು ಅನ್ನೋದು ವಿಶ್ಲೇಷಕರ ಮಾತು.
ರೋಹಿತ್-ಕೊಹ್ಲಿ: ಇದರ ಹೊರತಾಗಿ ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ ಕೂಡ ಇನ್ನಿಂಗ್ಸ್ ತೆರೆಯಬಹುದು. ಹಲವು ಸಂದರ್ಭಗಳಲ್ಲಿ ಇನ್ನಿಂಗ್ಸ್ ಆರಂಭಿಸಿರುವ ಕೊಹ್ಲಿ, ಈ ಸರಣಿಯಲ್ಲಿ ರೋಹಿತ್ ಜೊತೆಗೆ ಕಣಕ್ಕಿಳಿಯುವುದನ್ನು ನೋಡಬಹುದು. ಐಪಿಎಲ್ ಅವರ ಇನ್ನಿಂಗ್ ಆರಂಭಕ್ಕೆ ಉದಾಹರಣೆ. ಒಂದು ವೇಳೆ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದರೆ, ಗಿಲ್ ಅಥವಾ ಯಶಸ್ವಿ ಇಬ್ಬರಲ್ಲಿ ಒಬ್ಬರು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ.
ಆದರೆ, ಈ ತಂತ್ರಗಾರಿಕೆ ಕೈಗೂಡುವ ಸಾಧ್ಯತೆ ವಿರಳ. ಕಾರಣ, ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಫಿಟ್ ಆಗಿದ್ದಾರೆ. ಕೊಹ್ಲಿ ಇನ್ನಿಂಗ್ಸ್ ಆರಂಭಿಸುವುದರಿಂದ ತಂಡದ ಮಧ್ಯಮ ಕ್ರಮಾಂಕ ದುರ್ಬಲವಾಗಬಹುದು. ಒಂದು ವೇಳೆ ತಂಡ ಆರಂಭಿಕ ಆಘಾತ ಎದುರಿಸಿದರೆ ವಿರಾಟ್ ಪರಿಸ್ಥಿತಿಯನ್ನು ನಿಭಾಯಿಸಬಲ್ಲರು. ಹಾಗಾಗಿ ಇದು ಕೂಡ ಕೈಗೂಡದೇ ಇರಬಹುದು ಅನ್ನೋದು ವಿಶ್ಲೇಷಕರ ಲೆಕ್ಕಾಚಾರ. ಸದ್ಯಕ್ಕೆ ಯಾರನ್ನು ಯಾವ ಕ್ರಮಾಂಕದಲ್ಲಿ ಆಡಿಸಿದರೆ ತಂಡಕ್ಕೆ ಲಾಭ ಎಂಬ ಲೆಕ್ಕಾಚಾರ ನಡೆದಿದ್ದು ಸದ್ಯದಲ್ಲೇ ಇದಕ್ಕೆ ತೆರೆ ಬೀಳಲಿದೆ.
ಇದನ್ನೂ ಓದಿ:ಷಟ್ಲರ್ ಸಾಚಿ ಜೋಡಿಗೆ ಖೇಲ್ ರತ್ನ: ಶಮಿ, ಶೀತಲ್ ದೇವಿ ಸೇರಿ 26 ಸಾಧಕರಿಗೆ ಅರ್ಜುನ ಪ್ರಶಸ್ತಿ ಪ್ರದಾನ