ಪಂಜಾಬ್(ಮೊಹಾಲಿ): ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಆತಿಥೇಯ ಭಾರತ ಮತ್ತು ಪ್ರವಾಸಿ ಅಫ್ಘಾನಿಸ್ತಾನ ತಂಡಗಳು ಇಂದು ಮುಖಾಮುಖಿಯಾಗಲಿವೆ. ಉಭಯ ತಂಡಗಳ ನಡುವಿನ ಮೊದಲ ದ್ವಿಪಕ್ಷೀಯ ಸರಣಿ ಇದಾಗಿದ್ದು, ಮೊಹಾಲಿಯ ಐಎಸ್ ಬಿಂದ್ರಾ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿಕೊಂಡಿದೆ. ಚುಮುಚುಮು ಚಳಿಯ ನಡುವೆ ಟೀಂ ಇಂಡಿಯಾ ಆಟಗಾರರು ಬೆಳಿಗ್ಗೆ ಅಭ್ಯಾಸ ನಡೆಸಿದರು.
ಶೀತ, ಮೈ ಕೊರೆಯುವ ಚಳಿಯ ನಡುವೆ ಟೀಂ ಇಂಡಿಯಾ ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದೆ. ಆಟಗಾರರು ವಿಪರೀತ ಚಳಿಯ ಬಗ್ಗೆ ವಿಡಿಯೋದಲ್ಲಿ ಮಾತನಾಡುತ್ತಿರುವುದನ್ನು ಕಾಣಬಹುದು. ಮೊಹಾಲಿಯಲ್ಲಿ ಈಗ ಎಷ್ಟು ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ ಎಂದು ಅಕ್ಷರ್ ಪಟೇಲ್ ತಮ್ಮ ಪಕ್ಕದಲ್ಲಿದ್ದ ಸಹಆಟಗಾರನನ್ನು ಕೇಳಿದಾಗ, ಅವರು 12 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದಾಗಿ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಟೀಂ ಇಂಡಿಯಾದ ಎಲ್ಲ ಆಟಗಾರರು ಸ್ವೆಟರ್, ಗ್ಲೌಸ್ಗಳನ್ನು ತೊಟ್ಟು ಅಭ್ಯಾಸದಲ್ಲಿ ನಿರತರಾಗಿರುವುದನ್ನು ಕಾಣಬಹುದು. ಕೊರೆವ ಚಳಿಯನ್ನು ತಾಳಲಾರದೇ ಆಟಗಾರರು ತಮ್ಮ ಕೈಗಳನ್ನು ಉಜ್ಜಿಕೊಳ್ಳುತ್ತಿರುವ ದೃಶ್ಯವನ್ನೂ ಸಹ ನಾವು ನೋಡಬಹುದು.
ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಅರ್ಶ್‌ದೀಪ್ ಸಿಂಗ್, ಶುಭ್‌ಮನ್ ಗಿಲ್, ರಿಂಕು ಸಿಂಗ್, ಶಿವಂ ದುಬೆ, ಕುಲದೀಪ್, ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಆವೇಶ್ ಖಾನ್, ಕುಲದೀಪ್ ಯಾದವ್ ಮೊಹಾಲಿಯ ಚಳಿ ಬಗ್ಗೆ ತನ್ನ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ರಾಹುಲ್ ದ್ರಾವಿಡ್ ಬೆಂಗಳೂರಿನಲ್ಲೂ ಇಂತಹ ಚಳಿ ನಾನು ನೋಡಿಲ್ಲ ಎಂದರೆ, ಅಕ್ಸರ್ ಪಟೇಲ್, ಆವೇಶ್ ಖಾನ್ ಮುಂತಾದವರು ಇದು ಮೈನಸ್ ಡಿಗ್ರಿಯಲ್ಲ, ಅದಕ್ಕಿಂತಲೂ ಕಡಿಮೆಯಿರಬೇಕು ಎಂದು ತಮಾಷೆ ಮಾಡಿರುವುದು ವಿಡಿಯೋದಲ್ಲಿದೆ. ಕಠಿಣ ಅಭ್ಯಾಸ ನಡೆಸುತ್ತಿರುವ ಟೀಂ ಇಂಡಿಯಾಗೆ ನೆಟಿಜನ್ಗಳು ವಿಶ್ ಮಾಡುತ್ತಿದ್ದಾರೆ.
ಪಿಚ್ ವರದಿ: ಮೊಹಾಲಿಯ ಮೈದಾನ ಬ್ಯಾಟಿಂಗ್‌ಗೆ ಉತ್ತಮ ಎಂದು ಪರಿಗಣಿಸಲಾಗಿದೆ. ಈ ಪಿಚ್‌ನಲ್ಲಿ ದೊಡ್ಡ ಮೊತ್ತವನ್ನು ಕಟ್ಟಬಹುದು. ಈ ಮೈದಾನದಲ್ಲಿ ಇದುವರೆಗೆ 6 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿವೆ. ಭಾರತ ಇಲ್ಲಿ 4 ಪಂದ್ಯಗಳನ್ನು ಆಡಿದ್ದು, 3 ಪಂದ್ಯಗಳನ್ನು ಗೆದ್ದಿದ್ದರೆ, 1 ಪಂದ್ಯದಲ್ಲಿ ಸೋಲು ಕಂಡಿದೆ.