ಪಂಜಾಬ್(ಮೊಹಾಲಿ):ಅಫ್ಘಾನಿಸ್ತಾನದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಆರು ವಿಕೆಟ್ಗಳಿಂದ ಜಯ ದಾಖಲಿಸಿದೆ. ಈ ಮೂಲಕ ರೋಹಿತ್ ಶರ್ಮಾ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಮೊಹಾಲಿಯ ಐಎಸ್ ಬಿಂದ್ರಾ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 158 ರನ್‌ಗಳನ್ನು ಬಾರಿಸಿದ್ದರು. ಈ ಗುರಿ ಬೆನ್ನಟ್ಟಿದ ಭಾರತ ತಂಡ 17.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ಗಳ ಕಳೆದುಕೊಂಡು 159 ರನ್ಗಳೊಂದಿಗೆ ಗೆಲುವಿನ ನಗೆ ಬೀರಿತು.
ಶಿವಂ ದುಬೆ ಅರ್ಧಶತಕ:ಅಫ್ಘಾನಿಸ್ತಾನ ನೀಡಿದ್ದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭಿಕ ಆಘಾತ ಅನುಭವಿಸಿತು. ನಾಯಕ ರೋಹಿತ್ ಶರ್ಮಾ ಮೊದಲ ಓವರ್‌ನಲ್ಲೇ ರನೌಟ್ಗೆ ಸಿಲುಕಿಗೆ ಪೆವಿಲಿಯನ್ ಸೇರಿದರು. ಮತ್ತೊಬ್ಬ ಆರಂಭಿಕ ಶುಭಮನ್ ಗಿಲ್ 12 ಬಾಲ್ಗಳನ್ನು ಎದುರಿಸಿ ಐದು ಬೌಂಡರಿಗಳ ಸಮೇತ 23 ರನ್ ಬಾರಿಸಿ ನಿರ್ಗಮಿಸಿದರು. ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ 26 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇದರಿಂದ ತಂಡದ ಮೊತ್ತ 72 ರನ್ಗಳು ಆಗುವಷ್ಟರಲ್ಲಿ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡಿತು.
ಆದರೆ, ನಂತರದಲ್ಲಿ ಶಿವಂ ದುಬೆ ಮತ್ತು ಜಿತೇಶ್ ಶರ್ಮಾ ಉತ್ತಮ ಜೊತೆಯಾಟ ನೀಡಿದರು. ಇದರ ನಡುವೆ 20 ಬಾಲ್ಗಳಲ್ಲಿ ಐದು ಬೌಂಡರಿಗಳೊಂದಿಗೆ ಜಿತೇಶ್ ಶರ್ಮಾ 31 ರನ್ ಕಲೆ ಹಾಕಿ ನಿರ್ಮಿಸಿದರು. ಆದರೆ, ನಾಲ್ಕನೇ ವಿಕೆಟ್‌ಗೆ 45 ರನ್‌ಗಳ ಕಾಣಿಕೆ ನೀಡಿದ ಜೋಡಿ ಭಾರತ ಗೆಲುವಿನ ಆಸೆಯನ್ನು ಖಚಿತ ಪಡಿಸಿತು.
ಮತ್ತೊಂದೆಡೆ, ಶಿವಂ ದುಬೆ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ ಅರ್ಧಶತಕ ಬಾರಿಸಿದರು. 40 ಎಸತೆಗಳನ್ನು ಎದುರಿಸಿದ ಶಿವಂ ದುಬೆ ಐದು ಬೌಂಡರಿಗಳು ಮತ್ತು ಎರಡು ಸಿಕ್ಸರ್ ಸಮೇತ 60 ರನ್‌ಗಳನ್ನು ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ರಿಂಕು ಸಿಂಗ್ 9 ಬಾಲ್ಗಳಲ್ಲಿ ಎರಡು ಬೌಂಡರಿಗಳೊಂದಿಗೆ 16 ಗಳಿಸಿ ಅಜೇಯರಾಗಿ ಉಳಿದರು. ಅಫ್ಘಾನಿಸ್ತಾನದ ಪರ ಮುಜೀಬ್ ಉರ್ ರೆಹಮಾನ್ 2 ವಿಕೆಟ್ ಪಡೆದರೆ, ಅಜ್ಮತುಲ್ಲಾ ಒಮರ್ಝೈ 1 ವಿಕೆಟ್ ಪಡೆದರು.
ಅಫ್ಘಾನಿಸ್ತಾನದ ಇನ್ನಿಂಗ್ಸ್:ಇದಕ್ಕೂ ಮುನ್ನಬ್ಯಾಟಿಂಗ್ಗೆ ಇಳಿದ ಅಫ್ಘನ್ನರು ಭರ್ಜರಿ ಬ್ಯಾಟಿಂಗ್ ಮಾಡಿದರು. ಆರಂಭಿಕರಾದ ವಿಕೆಟ್ ಕೀಪರ್ ರಹಮಾನುಲ್ಲಾ ಗುರ್ಬಾಜ್ ಹಾಗೂ ನಾಯಕ ಇಬ್ರಾಹಿಂ ಜದ್ರಾನ್ ನಿಧಾನಗತಿಯ ಬ್ಯಾಟ್ ಬೀಸಿದರೂ, ಮೊದಲ ವಿಕೆಟ್‌ಗೆ 50 ರನ್‌ಗಳ ಜೊತೆಯಾಟ ನೀಡಿದರು.
ಈ ನಡುವೆ 23 ರನ್ ಗಳಿಸಿ ಆಡುತ್ತಿದ್ದ ರಹಮಾನುಲ್ಲಾ ಅವರು ಅಕ್ಸರ್ ಪಟೇಲ್ ಬೌಲಿಂಗ್ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಇದರ ಬೆನ್ನಲ್ಲೇ ನಾಯಕ ಜದ್ರಾನ್ ಅವರನ್ನು ಶಿವಂ ದುಬೆ ಔಟ್ ಮಾಡಿ ಅಫ್ಘನ್ನರಿಗೆ ಶಾಕ್ ನೀಡಿದರು. ಅಲ್ಲದೇ, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ರಹಮತ್ ಷಾ ಅವರನ್ನು ಅಕ್ಸರ್ ಪಟೇಲ್ ಬೌಲ್ಡ್ ಮಾಡಿದರು. ಇದರಿಂದ 10ನೇ ಓವರ್‌ಗಳ ಅಂತ್ಯಕ್ಕೆ ಅಫ್ಘಾನಿಸ್ತಾನ 57 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ, ಅಜ್ಮತುಲ್ಲಾ ಜೊತೆಗೂಡಿದ ಮೊಹಮ್ಮದ್ ನಬಿ ತಂಡಕ್ಕೆ ಆಸರೆಯಾದರು. ಇವರಿಬ್ಬರು ಅರ್ಧಶತಕದ ಜೊತೆಯಾಟ ನೀಡಿದರು. ಇದರಿಂದ ತಂಡಕ್ಕೆ ಚೇತರಿಸಿಕೊಂಡಿತು. ಆದರೆ, ಎರಡೂ ಸೆಟ್ ಬ್ಯಾಟರ್‌ಗಳನ್ನು ಮುಖೇಶ್ ಕುಮಾರ್ 18ನೇ ಓವರ್‌ನಲ್ಲಿ ಔಟ್ ಮಾಡಿದರು. ಅಜ್ಮತುಲ್ಲಾ 29 ರನ್ ಮತ್ತು ಮೊಹಮ್ಮದ್ ನಬಿ 42 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯ ಎರಡು ಓವರ್‌ಗಳಲ್ಲಿ ನಜಿಬುಲ್ಲಾ ಮತ್ತು ಕರೀಂ ಜನತ್ ಬಿರುಸಿನ ಬ್ಯಾಟ್ ಬೀಸಿದರು. ಐದು ಬೌಂಡರಿಗಳನ್ನು ಬಾರಿಸಿದ ಈ ಜೋಡಿ ತಂಡದ ಮೊತ್ತವನ್ನು 160ರ ಸಮೀಪಕ್ಕೆ ಕೊಂಡೊಯ್ದರು.
ಭಾರತ ಪರ ಅಕ್ಸರ್ ಪಟೇಲ್ ಮತ್ತು ಮುಖೇಶ್ ಕುಮಾರ್ ತಲಾ ಎರಡು ವಿಕೆಟ್, ಶಿವಂ ದುಬೆ ಒಂದು ವಿಕೆಟ್ ಪಡೆದರು. ರವಿ ಬಿಷ್ಣೋಯ್ 3 ಓವರ್‌ಗಳಲ್ಲಿ 35 ರನ್‌ಗಳನ್ನು ಬಿಟ್ಟುಕೊಟ್ಟು ತಂಡಕ್ಕೆ ದುಬಾರಿಯಾದರು.
ಭಾರತದ ವಿರುದ್ಧ ಅಫ್ಘಾನಿಸ್ತಾನದ ಗರಿಷ್ಠ ಮೊತ್ತ: ಅಲ್ಲದೇ, ಈ ಪಂದ್ಯದಲ್ಲಿ ಟಿ20 ಮಾದರಿಯಲ್ಲಿ ಭಾರತದ ವಿರುದ್ಧ 158 ರನ್‌ಗಳನ್ನು ಕಲೆ ಹಾಕಿದ ಅಫ್ಘಾನಿಸ್ತಾನ ಗರಿಷ್ಠ ಮೊತ್ತವನ್ನು ಬಾರಿಸಿದ ದಾಖಲೆಯನ್ನು ಬರೆಯಿತು. ಈ ಹಿಂದೆ ಅಬುಧಾಬಿಯಲ್ಲಿ ನಡೆದ 2021ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಆಫ್ಘನ್ ತಂಡ 7 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತ್ತು. ಇದುವರೆಗಿನ ಗರಿಷ್ಠ ಮೊತ್ತ ಇದಾಗಿತ್ತು.
ಇದನ್ನೂ ಓದಿ:ಮೊದಲ ಟಿ20ಗೆ ಸಿದ್ಧತೆ: ಮೈ ಕೊರೆಯುವ ಚಳಿಯಲ್ಲಿ ಟೀಂ ಇಂಡಿಯಾ ತಾಲೀಮು